ಸಿರ್ಸಾ (ಹರಿಯಾಣ): ಕೇರಳದಲ್ಲಿ ಗರ್ಭಿಣಿ ಆನೆಯ ಬಾಯಿಗೆ ಅನಾನಸ್ ಜೊತೆ ಪಟಾಕಿ ಇಟ್ಟು ತಿನ್ನಿಸಿದ್ದರಿಂದ ಅದು ಸ್ಫೋಟಗೊಂಡು ಬಾಯಿಗೆ ಗಂಭೀರ ಗಾಯವಾಗಿ ಆನೆ ಸಾವನ್ನಪ್ಪಿದ ಘಟನೆ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದೇ ರೀತಿಯ ಹೃದಯವಿದ್ರಾವಕ ಘಟನೆಯೊಂದು ಹರಿಯಾಣದಲ್ಲಿ ನಡೆದಿದೆ. ಹುಲ್ಲು ತಿನ್ನುವಾಗ ಬಾಯಿಯಲ್ಲಿ ಸ್ಫೋಟಕವೊಂದು ಸ್ಫೋಟಿಸಿದ್ದರಿಂದ ಹಸು ಸಾವನ್ನಪ್ಪಿದೆ.
ಹರಿಯಾಣದ ಸಿರ್ಸಾ ಜಿಲ್ಲೆಯ ಲುಖುವಾನಾ ಗ್ರಾಮದಲ್ಲಿ ಪಶುಸಂಗೋಪನೆ ನಡೆಸುತ್ತಿರುವ ಸತ್ಪಾಲ್ ಸಿಂಗ್ ಎಂಬುವರಿಗೆ ಸೇರಿದ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ಸ್ಫೋಟಕ ಸಿಡಿದು ಬಾಯಿಗೆ ಗಂಭೀರ ಗಾಯವಾಗಿ ಹಸು ಮೃತಪಟ್ಟಿದೆ. ಉದ್ದೇಶಪೂರ್ವಕವಾಗಿ ಹಸುವಿನ ಬಾಯಿಗೆ ಸ್ಫೋಟಕಗಳನ್ನು ತುರುಕಿ ಸ್ಫೋಟಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಸತ್ಪಾಲ್ ಠಾಣೆಗೆ ದೂರು ನೀಡಿದ್ದಾರೆ.
ಲಖುವಾನಾ ಕಾಲುವೆಯ ಮೇಲಿನ ಬಿಸ್ವಾಲಾ ಸೇತುವೆಯ ಬಳಿ ಹಸುಗಳು ಮೇಯುತ್ತಿದ್ದವು. ಏಕಾಏಕಿ ಭಾರಿ ಸ್ಫೋಟ ಕೇಳಿಸಿತು. ಸ್ಥಳಕ್ಕೆ ಬಂದು ನೋಡಿದಾಗ ಸ್ಫೋಟದ ತೀವ್ರತೆಗೆ ಹಸುವಿನ ದವಡೆ ಛಿದ್ರವಾಗಿತ್ತು. ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಆ್ಯಂಬುಲೆನ್ಸ್ ಕರೆಯಿಸಿ ಹಸುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅದು ಸಾವನ್ನಪ್ಪಿದೆ ಎಂದು ಸತ್ಪಾಲ್ ಹೇಳಿದ್ದಾರೆ.
ದೂರನ್ನು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಬಳಸಿದ ಸ್ಫೋಟಕಗಳನ್ನು ಪತ್ತೆ ಮಾಡಲು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಓದಿ: ವಂಚನೆ ಬಯಲು.. ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಿನಲ್ಲಿ ಪಾವತಿಯಾಗ್ತಿತ್ತು ಡಯಾಲಿಸಿಸ್ ಮಾಡಿದ ಬಿಲ್!