ಚಂಡೀಗಢ: ಹರಿಯಾಣದ ಬಾಸ್ಮತಿ ಅಕ್ಕಿಯ ವಿಷಯದಲ್ಲಿ ಈಗ ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ವಿವಾದವೊಂದು ತಲೆಯೆತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಗೆ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಭಾರತ, ತನ್ನ ಬಾಸ್ಮತಿ ಅಕ್ಕಿಗೆ ವಿಶೇಷ ಟ್ರೇಡಮಾರ್ಕ್ ನೀಡುವಂತೆ ಯುರೋಪ ರಾಷ್ಟ್ರಗಳ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಮಾನ್ಯಗೊಂಡು ಭಾರತಕ್ಕೆ ಟ್ರೇಡಮಾರ್ಕ್ ಹಕ್ಕು ಸಿಗುವ ಎಲ್ಲ ಸಂಭವಗಳಿವೆ. ಆದರೆ, ಭಾರತದ ಈ ಕ್ರಮದಿಂದ ಪಾಕಿಸ್ತಾನ ಅಸಮಾಧಾನಗೊಂಡಿದ್ದು, ಭಾರತದ ಅರ್ಜಿಗೆ ವಿರೋಧ ವ್ಯಕ್ತಪಡಿಸಿದೆ.
ಪಾಕಿಸ್ತಾನ ಹೇಳುವುದೇನು?
ಭಾರತವು ಬಾಸ್ಮತಿ ಅಕ್ಕಿ ಟ್ರೇಡಮಾರ್ಕ್ಗೆ ಅರ್ಜಿ ಸಲ್ಲಿಸಿರುವುದು ನಮ್ಮ ದೇಶದ ಮೇಲೆ ಪರಮಾಣು ಬಾಂಬ್ ದಾಳಿ ಮಾಡಿದಂತೆ ಎಂದು ಪಾಕ್ ಆಲಾಪಿಸತೊಡಗಿದೆ. ಯುರೋಪಿಯನ್ ಕಮೀಷನ್ ಭಾರತಕ್ಕೆ ಪ್ರೊಟೆಕ್ಟೆಡ್ ಜಿಯಾಗ್ರಫಿಕಲ್ ಇಂಡಿಕೇಶನ್ (ಪಿಜಿಐ) ನೀಡದಂತೆ ಪಾಕ್ ವಾದ ಮಾಡುತ್ತಿದೆ. ಪಾಕಿಸ್ತಾನದ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ದುರುದ್ದೇಶದಿಂದಲೇ ಭಾರತ ಹೀಗೆಲ್ಲ ಮಾಡುತ್ತಿದೆ ಎಂದು ಪಾಕಿಸ್ತಾನ ಬುರುಡೆ ಬಿಡುತ್ತಿದೆ.
ಭಾರತ ಹೇಳುವುದೇನು?
ಹಿಮಾಲಯದ ತಲಹಟಿ ಎಂಬಲ್ಲಿ ಬೆಳೆಯುವ ವಿಶಿಷ್ಟ ಅಕ್ಕಿಯು ತನ್ನ ದೇಶದಲ್ಲಿ ಮಾತ್ರ ಬೆಳೆಯುತ್ತದೆ ಎಂದು ಅರ್ಜಿಯಲ್ಲಿ ಭಾರತ ಹೇಳಿಯೇ ಇಲ್ಲ. ಆದರೆ, ಒಂದೊಮ್ಮೆ ಅರ್ಜಿಗೆ ಪಿಜಿಐ ಟ್ಯಾಗ್ ಮಾನ್ಯತೆ ಸಿಕ್ಕಲ್ಲಿ ಆ ರೀತಿಯ ಹಕ್ಕು ನಮಗೆ ಸಹಜವಾಗಿಯೇ ಸಿಗಲಿದೆ ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ಅಂಕಿ - ಅಂಶಗಳ ಪ್ರಕಾರ ಭಾರತ ಅಕ್ಕಿಯ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ವಿಶ್ವದಲ್ಲಿ ಅಕ್ಕಿ ವ್ಯಾಪಾರದಿಂದ ಒಟ್ಟಾರೆಯಾಗಿ 6.8 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಲಾಗುತ್ತದೆ. ಭಾರತದ ಅಕ್ಕಿ ಖರೀದಿಸುವವರಲ್ಲಿ 5 ಮುಂಚೂಣಿ ರಾಷ್ಟ್ರಗಳು ಕೊಲ್ಲಿ ರಾಷ್ಟ್ರಗಳಾಗಿವೆ. ಪ್ರತಿವರ್ಷ ವಿಶ್ವದಲ್ಲಿ ನಡೆಯುವ ಒಟ್ಟು ಅಕ್ಕಿ ವ್ಯಾಪಾರದ ಶೇ 25 ರಷ್ಟು ಪಾಲಿನೊಂದಿಗೆ ಭಾರತದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದೆ.