ಹೈದರಾಬಾದ್: ಕೋವಿಡ್–19 ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಹಲವು ಸಮಸ್ಯೆಗಳ ನಡುವೆಯೇ ಈ ಬಾರಿ ಉತ್ತರಾಖಂಡದ ಹರಿದ್ವಾರದಲ್ಲಿ 'ಕುಂಭಮೇಳ' ನಡೆಯಲಿದೆ. ಈ ಮಹಾ ಮೇಳವು ವಿಶ್ವದ ಬೃಹತ್ ಧಾರ್ಮಿಕ ಸಮಾಗಮ ಎಂದೇ ಖ್ಯಾತಿಯಾಗಿದೆ. ಅಲ್ಲದೇ, ಇದು ಜಗತ್ತಿನ ಅತಿದೊಡ್ಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದ್ದು, ಹಿಂದೂ ಧರ್ಮದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಈ ಮಹಾಮೇಳದಲ್ಲಿ ಭಾಗಿಯಾಗಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಲು ಬಯಸುತ್ತಾರೆ.
ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಭಕ್ತರಲ್ಲಿ ವೈರಸ್ ಹರಡುವಿಕೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ತಡೆಗಟ್ಟಲು ಕಠಿಣ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅನುಸರಿಸಬಹುದಾದ ಕ್ರಮಗಳ ಕುರಿತು ಕೆಲವೊಂದಿಷ್ಟು ಮಾಹಿತಿಗಳಿವೆ.
ಕೋವಿಡ್ 19 ಮತ್ತು ಕುಂಭಮೇಳ
ಕೊರೊನಾ ಸಾಂಕ್ರಮಿಕದ ನಡುವೆಯೂ ನಡೆಯುತ್ತಿರುವ ಕುಂಭಮೇಳದಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಈಟಿವಿ ಭಾರತ್ ಸುಖೀಭವ ತಂಡ ಡಾ. ಅರ್ಜುನ್ ಸಿಂಗ್ ಸಾಗರ್ ಅವರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಕಳೆದ ಎರಡು ಅವಧಿಯಲ್ಲಿ ನಡೆದ ( 2010 ಮತ್ತು 2016) ಕುಂಭಮೇಳಕ್ಕಿಂತ ಈ ಬಾರಿ ಭಿನ್ನವಾದ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದಿದ್ದಾರೆ.
ಕುಂಭ ಸ್ನಾನಕ್ಕೆ ಬರುವ ಭಕ್ತರ ನಿರಂತರ ತಪಾಸಣೆ ಮತ್ತು ಮೇಲ್ವಿಚಾರಣೆ ಮತ್ತು ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು. ಹಾಗೆಯೇ ಇಲ್ಲಿಗೆ ಬರುವ ಭಕ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರನ್ನು ಕೂಡಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು.
ಹರಿದ್ವಾರಕ್ಕೆ ಕುಂಭಮೇಳದ ಪವಿತ್ರ ಸ್ನಾನಕ್ಕಾಗಿ ಆಗಮಿಸುವ ಸಾಧುಗಳಿಗೆ ಹಾಗೂ ಭಕ್ತರಿಗಾಗಿ ಈಗಾಗಲೇ 107 ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಬರುವಾಗ ಕುಂಜ್ ಗಲಿಯಾನ್ (ಕಿರಿದಾದ ಹಾದಿ) ಗಳ ಮೂಲಕ ಬರಬೇಕಾಗಿರುವುದರಿಂದ ಏನಾದರು ಅಪಾಯ ಎದುರಾಗಬಹುದು ಎಂಬ ನಿಟ್ಟಿನಲ್ಲಿ ಸುಮಾರು 8 ಆಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಅಸ್ವಸ್ಥರಾದ ಜನರನ್ನು ಆಸ್ಪತ್ರೆಗೆ ಕರೆದೊಯ್ಯಲು ಸುಮಾರು 122 ಆಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಹರಿದ್ವಾರ ತಲುಪಲು 6 ರಸ್ತೆ ಮತ್ತು 5 ರೈಲ್ವೆ ಮಾರ್ಗಗಳಿವೆ. ಯಾವುದೇ ರಸ್ತೆಮಾರ್ಗಗಳ ಮೂಲಕ ಬಂದರೂ ಕೂಡಾ ಅಲ್ಲಲ್ಲಿ ಆಸ್ಪತ್ರೆಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಇವು ಜನರ ಆತಂಕವನ್ನು ದೂರ ಮಾಡಲಿವೆ. ಎಲ್ಲಾ ಗಡಿಗಳಲ್ಲಿ ಅಥವಾ ಹರಿದ್ವಾರದಲ್ಲಿ ಭಕ್ತರನ್ನು ಪರೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಅಗತ್ಯ ಕಂಡುಬಂದರೆ ಪೋಸ್ಟ್ ಸ್ಕ್ರೀನಿಂಗ್, ರಾಪಿಡ್ ಆಂಟಿಜೆನ್ ಟೆಸ್ಟ್, ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತದೆ. ಇದಲ್ಲದೆ, ಕೋವಿಡ್-19 ಪಿಡುಗನ್ನು ಗಮನದಲ್ಲಿಟ್ಟುಕೊಂಡು ಸುಮಾರು 1000 ಹಾಸಿಗೆಗಳನ್ನು ಹೊಂದಿರುವ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕುಂಭಮೇಳಕ್ಕೆ ಹಾಜರಾಗುವ ಎಲ್ಲಾ ಭಕ್ತರಿಗೆ ಸರ್ಕಾರ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದ್ದು, ನಿಯಮದಂತೆ ಪ್ರತಿಯೊಬ್ಬರು ತಮ್ಮ ಆರ್ಟಿಪಿಸಿಆರ್ ವರದಿಯೊಂದಿಗೆ ಹರಿದ್ವಾರಕ್ಕೆ ಬರಬೇಕು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಇದರ ಮಾಹಿತಿ ತಿಳಿಯದೇ ಬರುವ ಯಾತ್ರಾರ್ಥಿಗಳಿಗಾಗಿ ಇಲ್ಲಿಯೇ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಕರ ಸಂಕ್ರಾಂತಿಯಿಂದಲೇ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಆರಂಭವಾಗಿರುವ ಹಿನ್ನೆಲೆ, ಇಲ್ಲಿನ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧರ್ಮಶಾಲಾಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ನಿರ್ದೇಶಿಸಲಾಗಿದೆ.
ಭಕ್ತರ ಆರೋಗ್ಯ ಅಗತ್ಯತೆಗಳನ್ನು ಪೂರೈಸುವ ಸಿದ್ಧತೆಗಳು
ಕುಂಭಮೇಳದಲ್ಲಿ ಸಂಭವನೀಯ ತುರ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ 600 ಕ್ಕೂ ಹೆಚ್ಚು ತಾತ್ಕಾಲಿಕ ಬೆಡ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 100 ಹಾಸಿಗೆಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ ಎಂದು ಡಾ. ಸೆಂಗರ್ ತಿಳಿಸಿದ್ದಾರೆ. ಭಕ್ತರ ತುರ್ತು ಅಗತ್ಯತೆಗಳಿಗೆ ತಕ್ಕಂತೆ ಹಾಗೂ ಇತರ ಅಗತ್ಯತೆಗಳಿಗೆ ಹಾಜರಾಗಲು ತಲಾ 20 ಹಾಸಿಗೆಗಳನ್ನು ಹೊಂದಿರುವ 50 ಆಸ್ಪತ್ರೆಗಳು ಮತ್ತು ತಲಾ 10 ಹಾಸಿಗೆಗಳನ್ನು ಹೊಂದಿರುವ 22 ಆಸ್ಪತ್ರೆಗಳನ್ನು ಒದಗಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆ 2000 ಹಾಸಿಗೆಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಯನ್ನು ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಒದಗಿಸಿದೆ. ಶ್ಲಾಘನೀಯ ಸಂಗತಿಯೆಂದರೆ, ಎಲ್ಲಾ ತಾತ್ಕಾಲಿಕ ಮತ್ತು ಸಾಮಾನ್ಯ ಆಸ್ಪತ್ರೆಗಳು ತುರ್ತು ವಾರ್ಡ್‌ಗಳು, ಐಸಿಯು ಮತ್ತು ಬರ್ನ್ ಯುನಿಟ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಂಪೂರ್ಣವಾಗಿ ಹೊಂದಿವೆ.
ಕುಂಭಮೇಳವು ನಮ್ಮ ದೇಶದ ಅತಿದೊಡ್ಡ ಬೃಹತ್ ಧಾರ್ಮಿಕ ಸಮಾಗಮವಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಹೀಗಾಗಿ, ಇಲ್ಲಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಆರೋಗ್ಯ ಸಂಬಂಧಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪೂರೈಸಲಾಗುವುದು ಎಂದು ಡಾ. ಸಾಗರ್ ತಿಳಿಸಿದ್ದಾರೆ. ಇದರೊಂದಿಗೆ, ಕುಂಭಮೇಳದ ಪವಿತ್ರ ಸ್ನಾನದಲ್ಲಿ ಭಾಗಿಯಾಗಲು ಆಗಮಿಸುವ ಭಕ್ತರಿಗೆ ಆರೋಗ್ಯಕರ ರೀತಿಯಲ್ಲಿ ಸಹಾಯ ಮಾಡಲು ಜಿಲ್ಲಾಡಳಿತವು ಸಕಲ ಪ್ರಯತ್ನವನ್ನು ಮಾಡುತ್ತಿದೆ ಎಂದಿದ್ದಾರೆ.