ಜೈಪುರ: ವಿದೇಶಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವತಿ ತನ್ನ ಹೋಟೆಲ್ಗೆ ಹೋಗುವ ದಾರಿಯಲ್ಲಿ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ದೌರ್ಜನ್ಯ ಎಸಗಲು ಆರೋಪಿ ಮುಂದಾಗಿದ್ದ ದೃಶ್ಯ ವೈರಲ್ ಆಗಿತ್ತು. ಈ ವಿಡಿಯೋ ಬೆನ್ನಲ್ಲೇ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದರು. ಈ ವೇಳೆ ಆರೋಪಿ ಚಾಣಾಕ್ಷತನದಿಂದ ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ಮೀಸೆಯನ್ನು ಬೋಳಿಸಿಕೊಂಡಿದ್ದ. ಆದರೆ, ವಿಡಿಯೋದಲ್ಲಿದ್ದ ಉಡುಪಿನಲ್ಲಿಯೇ ಆತ ಇದ್ದ ಕಾರಣ ಆತನನ್ನು ಪೊಲೀಸರು ಸುಲಭವಾಗಿ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕುಲ್ದೀಪ್ ಸಿಂಗ್ ಸಿಸೋಡಿಯಾ (40) ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ವಿದಯಕ್ಪುರಿ ಪೊಲೀಸ್ ಸ್ಟೇಷನ್ ಅಧಿಕಾರಿ ಭಾರತ್ ಸಿಂಗ್ ರಾಥೋಡ್, ಪೊಲೀಸ್ ವಾಟ್ಸಾಪ್ ನಂಬರ್ಗೆ ಈ ವಿದೇಶಿ ಪ್ರಜೆಗೆ ದೌರ್ಜನ್ಯ ನಡೆಸುತ್ತಿರುವ ವಿಡಿಯೋವನ್ನು ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಐಪಿಸಿ ಸೆಕ್ಷನ್ 354 ಅಡಿ ಸೋಮವಾರ ರಾತ್ರಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಬ್ರಿಟಿಷ್ ವಿದೇಶಿ ಮಹಿಳೆ ಆಕೆಯ ಸ್ನೇಹಿತೆ ಜೊತೆಗೆ ಮೋತಿಲಾಲ್ ಅಟಾಲ್ ರೋಡ್ನಲ್ಲಿ 18 ದಿನದಿಂದ ವಾಸ್ತವ್ಯ ಹೂಡಿರುವುದು ತಿಳಿದು ಬಂದಿತ್ತು. ಆರೋಪಿ ಟ್ಯಾಕ್ಸಿ ಅಥವಾ ಕ್ಯಾಬ್ ಡ್ರೈವರ್ ಆಗಿದ್ದು, ಆಕೆ ನಡೆದು ಹೋಗುವಾಗ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದ. ಆರೋಪಿ ಮೀಸೆ ಬೋಳಿಸಿಕೊಂಡು ತಲೆಮರೆಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಜೈಪುರದಲ್ಲಿ ಬಂಧಿಸಿ ತನಿಖೆಗೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗಿದೆ ಪೊಲೀಸ್ ಅಧಿಕಾರಿ ರಾಥೋಡ್ ತಿಳಿಸಿದ್ದಾರೆ.
ಡಿಸಿಡಬ್ಲೂ ಮುಖ್ಯಸ್ಥೆಯಿಂದಲೂ ಟ್ವೀಟ್: ಬಂಧನದ ಬಳಿಕ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ರಾಜಸ್ಥಾನ ಮುಖ್ಯಮಂತ್ರಿ ಮತ್ತು ರಾಜಸ್ಥಾನದ ಪೊಲೀಸರಿಗೆ ಕೋರಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಮಾಲಿವಾಲ್ ಕೂಡ ಹಂಚಿಕೊಂಡಿದ್ದು, ವಿದೇಶಿ ಪ್ರವಾಸಿ ಮಹಿಳೆ ಜೊತೆ ವ್ಯಕ್ತಿ ಅಸಭ್ಯವಾಗಿ ವರ್ತಿಸುತ್ತಿರುವುದು ನಿಜಕ್ಕೂ ಅವಮಾನಕರವಾಗಿದೆ ಎಂದು ಬರೆದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸರಿಗೆ ಟ್ವೀಟ್ ಟ್ಯಾಗ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೇ ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರನ್ನು ತರುತ್ತವೆ ಎಂದಿದ್ದರು.
ಪೊಲೀಸರಿಗೆ ಧನ್ಯವಾದ ತಿಳಿಸಿದ ವಿದೇಶಿ ಮಹಿಳೆ: ಮತ್ತೊಂದೆಡೆ, ಸಂತ್ರಸ್ತ ಮಹಿಳೆಯನ್ನು ಸಂಪರ್ಕಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಆಕೆಯ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪೊಲೀಸರು ಸಂಪರ್ಕಿಸಿದ್ದರು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಕೆಗೆ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಮಹಿಳೆ ಪ್ರತಿಕ್ರಿಯಿಸಿ, ರಾಜಸ್ಥಾನ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಬೆಂಗಳೂರಲ್ಲೂ ನಡೆದಿತ್ತು ದೌರ್ಜನ್ಯದ ಘಟನೆ: ಕಳೆದ ತಿಂಗಳು ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ ಪ್ರಜೆಯಾಗಿದ್ದ ವಿದೇಶಿ ಟ್ರಾವೆಲ್ ಬ್ಲಾಗರ್ ಹಾಗೂ ಯೂಟ್ಯೂಬರ್ ಪೆದ್ರೊ ಮೊಟಾ ಎಂಬಾತ ಸಿಲಿಕಾನ್ ಸಿಟಿಯ ಜನನಿಬಿಡ ರಸ್ತೆ ಎಸ್ಪಿ ರೋಡ್ನಲ್ಲಿ ವಿಡಿಯೋ ಮಾಡಿಕೊಂಡು ತೆರಳುತ್ತಿದ್ದರು. ಇದೇ ವೇಳೆ ಸ್ಥಳೀಯ ಅಂಗಡಿ ಮಾಲೀಕನೊಬ್ಬ ಆತನನ್ನು ತಡೆದು ಮೊಬೈಲ್ ಕಸಿಯುವ ಪ್ರಯತ್ನ ನಡೆಸಿದ್ದು, ಈ ಘಟನೆ ವಿಡಿಯೋದಲ್ಲಿ ದಾಖಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಬೆಂಗಳೂರು ಪೊಲೀಸರು ಆರೋಪಿ ನವಾಬ್ ಹಯಾತ್ ಶರಿಫ್ನನ್ನು ಬಂಧಿಸಿದ್ದರು.
ಇದನ್ನೂ ಓದಿ: WFI ಲೈಂಗಿಕ ಕಿರುಕುಳ ಪ್ರಕರಣ: ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ - ಬಜರಂಗ್ ಪುನಿಯಾ