ಅಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಇ-ರಿಕ್ಷಾ ಚಾಲಕನೊಬ್ಬ ಲೇವಾದೇವಿಗಾರರ ಕಿರುಕುಳವನ್ನು ತಾಳಲಾರದೆ ತನ್ನ ಮಗನನ್ನೇ ಮಾರಾಟಕ್ಕೆ ಇಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಗುರುವಾರ ತಡರಾತ್ರಿ ಸಂತ್ರಸ್ತ ರಾಜ್‌ಕುಮಾರ್ ಎಂಬ ವ್ಯಕ್ತಿ ನಗರದ ಗಾಂಧಿ ಪಾರ್ಕ್‌ನಲ್ಲಿ ಪತ್ನಿ, ಪುತ್ರ ಹಾಗೂ ಮಗಳೊಂದಿಗೆ ಕುಳಿತಿದ್ದರು. ಸಂತ್ರಸ್ತ ತನ್ನ ಕೊರಳಿಗೆ ಫಲಕವೊಂದನ್ನು ನೇತು ಹಾಕಿಕೊಂಡಿದ್ದಾರೆ. ಆ ಫಲಕದಲ್ಲಿ, "ನನ್ನ ಮಗನನ್ನು ನಾನು ಮಾರಾಟ ಮಾಡಬೇಕಿದೆ. ನನ್ನ ಪುತ್ರನನ್ನು ಮಾರಾಟಕ್ಕೆ ಇಟ್ಟಿದ್ದೇನೆ" ಎಂದು ಬರೆದು ನ್ಯಾಯಕ್ಕಾಗಿ ಅವರು ಒತ್ತಾಯಿಸಿದ್ದಾರೆ.
ಕುಟುಂಬ ಸದಸ್ಯರು ಮೌನ ಪ್ರತಿಭಟನೆ: ಸಂತ್ರಸ್ತ ರಾಜ್‌ಕುಮಾರ್ ಜೊತೆಗೆ ಆತನ ಕುಟುಂಬದ ಸದಸ್ಯರು ಮೌನ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿ ಹಲವು ಜನರು ಜಮಾಯಿಸಿದ್ದಾರೆ. ಈ ಘಟನೆಯಿಂದ ಆತಂಕಕ್ಕೆ ಒಳಗಾದ ಜನರು, ಪ್ರತಿಭಟನೆಯನ್ನು ಕೈಬಿಡಲು ಆ ವ್ಯಕ್ತಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಯಾವುದಕ್ಕೂ ಜಗ್ಗದ ಆತ ತನ್ನ ಕುತ್ತಿಗೆಗೆ ಮಾರಾಟದ ಫಲಕ ಕುಳಿದ್ದನು. ತನ್ನ ಮಗನನ್ನು ಮಾರಾಟ ಮಾಡುವಂತೆ ನೆರದಿದ್ದ ಜನರಿಗೆ ಕೇಳುತ್ತಲೇ ಇದ್ದನು.
ಅಳಲು ತೋಡಿಕೊಂಡ ಸಂತ್ರಸ್ತ ರಾಜ್‌ಕುಮಾರ್: ಇದೇ ವೇಳೆ ಸಂತ್ರಸ್ತ ರಾಜ್‌ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ''ಇ-ರಿಕ್ಷಾ ಓಡಿಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದೇನೆ. ಆದರೆ, ನಾನು ಭಾರಿ ಸಾಲದಿಂದ ತೊಂದರೆಗೆ ಈಡಾಗಿದ್ದೇನೆ. ಇದರಿಂದ ಲೇವಾದೇವಿಗಾರರು ತನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ. ತನ್ನ ಕುಟುಂಬದ ಸದಸ್ಯರ ಸಮೇತ ಥಳಿಸಿ, ಮನೆಯಿಂದ ಹೊರ ಹಾಕಿದ್ದಾರೆ. ಇದಲ್ಲದೆ, ತಮ್ಮ ಇ-ರಿಕ್ಷಾವನ್ನು ಸಹ ಲೇವಾದೇವಿಗಾರರು ತೆಗೆದುಕೊಂಡು ಹೋಗಿದ್ದಾರೆ'' ಎಂದು ಅಳಲು ತೋಡಿಕೊಂಡರು.
''ನ್ಯಾಯಕ್ಕಾಗಿ ಮಹುವಾ ಖೇಡಾ ಪೊಲೀಸ್ ಠಾಣೆಗೆ ಹಲವು ದಿನಗಳಿಂದ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರು ಎಫ್‌ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಪೊಲೀಸರ ನಿಷ್ಕ್ರಿಯತೆಯಿಂದ ತನ್ನ ಮಗನನ್ನು ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು'' ಎಂದು ಸಂತ್ರಸ್ತ ಆರೋಪ ಮಾಡಿದ್ದಾರೆ.
ಪೊಲೀಸ್ ಅಧಿಕಾರಿ ಹೇಳಿದ್ದೇನು?: ಘಟನೆ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಸಂತ್ರಸ್ತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಮನೆಗೆ ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತ ರಾಜ್ಕುಮಾರ್ಗೆ ಲೇವಾದೇವಿಗಾರರು ತೀವ್ರ ಕಿರುಕುಳ ನೀಡಿದ ಆರೋಪ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ಗೆ ಸಂಬಂಧಿಸಿದ ನಾಲ್ವರು ಆರೋಪಿಗಳ ಬಂಧನ