ಅಹಮದಾಬಾದ್: ಹರಾಮಿನಾಲಾದ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನದ 7 ಮೀನುಗಾರಿಕಾ ದೋಣಿಗಳನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಬಿಎಸ್ಎಫ್ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ಇದುವರೆಗೆ 6 ಪಾಕಿಸ್ತಾನಿ ಮೀನುಗಾರರು ಮತ್ತು 11 ಪಾಕಿಸ್ತಾನಿ ದೋಣಿಗಳು ಸಿಕ್ಕಿಬಿದ್ದಿವೆ.
ಮಾಹಿತಿ ಬಂದ ತಕ್ಷಣ ಬಿಎಸ್ಎಫ್ ಕಮಾಂಡೋಗಳು ಆ ಪ್ರದೇಶದ 300 ಚದರ ಕಿಲೋಮೀಟರ್ ದುರ್ಗಮ ತೊರೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಗುಜರಾತ್ ಗಡಿ ಭದ್ರತಾ ಪಡೆಯ ಮುಖ್ಯಸ್ಥ ಜಿ. ಮಲಿಕ್ ಸಹ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ
ಬಿಎಸ್‌ಎಫ್ ಕಮಾಂಡೋಗಳನ್ನು ಕಂಡ ಪಾಕಿಸ್ತಾನಿ ಮೀನುಗಾರರು ಬೋಟ್ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಬಿಎಸ್‌ಎಫ್ ಕಮಾಂಡೋಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಚ್ ಸಮುದ್ರದಲ್ಲಿ ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳು ಇರುವ ಕಾರಣ, ಪಾಕಿಸ್ತಾನಿ ಮೀನುಗಾರರು ಹೆಚ್ಚಾಗಿ ಭಾರತದ ಈ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ. ವಶಪಡಿಸಿಕೊಂಡ ಪಾಕಿಸ್ತಾನದ ದೋಣಿಯಿಂದ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ದೋಣಿಯಲ್ಲಿ ಕೊಳೆತ ಮೀನುಗಳು ಮಾತ್ರ ಪತ್ತೆಯಾಗಿವೆ.