ಶಹಜಹಾನ್‌ಪುರ(ಉತ್ತರ ಪ್ರದೇಶ): ತೆಂಗಿನ ಮರ ಸೇರಿದಂತೆ ಇತರ ಮರಗಳನ್ನೂ ಕೂಡ ಬೇರೆ ಜಾಗಕ್ಕೆ ಬುಡಸಮೇತ ಕಿತ್ತು ನೆಡುವುದನ್ನೂ ನೀವು ನೋಡಿರಬಹುದು. ಅಂತೆಯೇ ಕೆಲವೊಮ್ಮೆ ರಸ್ತೆ ಕಾಮಗಾರಿಗಳಿಗಾಗಿ ಮೂರ್ತಿಗಳನ್ನು ಬೇರೆಡೆಗೆ ಸ್ಥಳಾಂತರ, ಸ್ಥಳ ಬದಲಾವಣೆ ಮಾಡಲಾಗುತ್ತದೆ. ಆದರೆ ಇಲ್ಲಿ ದೇವಾಲಯವನ್ನೇ ಸ್ಥಳಾಂತರ ಮಾಡುವ ಅಪರೂಪದ ಕಾರ್ಯ ನಡೆಯುತ್ತಿದೆ.
ಉತ್ತರಪ್ರದೇಶದ ಲಖನೌ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಚಿಯಾನಿ ಖೇಡಾದ ಹನುಮಾನ್ ದೇವಸ್ಥಾನ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಹೆದ್ದಾರಿಯಿಂದ ತೆರವು ಮಾಡಲಾಗುತ್ತಿದೆ. ಜಾಕ್ ನೆರವಿನಿಂದ ದೇವಾಲಯವನ್ನು 8 ಅಡಿ ಹಿಂದಕ್ಕೆ ಸರಿಸಲಾಗಿದೆ. ಈ ಅಪರೂಪದ ಕಾರ್ಯಾಚರಣೆ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
![hanuman-temple-moved-back-8-feet-in-shahjahanpur](https://etvbharatimages.akamaized.net/etvbharat/prod-images/up-sjp-01-hanumanmandir-pkg-up10021_31122022143145_3112f_1672477305_250.jpg)
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಕಚ್ಚಿಯಾನಿ ಖೇಡದ ಹನುಮಾನ ದೇವಸ್ಥಾನವನ್ನು ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಲಾಗುತ್ತಿದೆ. ಸ್ಥಳಾಂತರಿಸುವ ಸಲುವಾಗಿ ದೇವಸ್ಥಾನದ ತಳಭಾಗವನ್ನು ನೆಲಮಟ್ಟದಿಂದ ಬೇರ್ಪಡಿಸಿ, ಜಾಕ್ ಮಾಡುವ ಮೂಲಕ ನಿಧಾನವಾಗಿ ಹಿಂದಕ್ಕೆ ಕೊಂಡೊಯ್ಯುವ ಕೆಲಸ ಸಾಗುತ್ತಿದೆ.
ಈ ಹನುಮಾನ್ ದೇವಾಲಯವು ಸುಮಾರು 15 ಚದರ ಮೀಟರ್ ವಿಸ್ತಾರವಾಗಿದೆ. 64 ಅಡಿ ಉದ್ದ ಮತ್ತು 36 ಅಡಿ ಅಗಲವಾಗಿದೆ. ಹನುಮಾನ್ ದೇವರ ಬೃಹತ್ ವಿಗ್ರಹವನ್ನು ಸಹ ಹಿಂದಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಕೆಲಸ ಮುಗಿಯಲು ಸುಮಾರು 1 ತಿಂಗಳು ಹೆಚ್ಚು ಸಮಯ ಬೇಕಾಗಲಿದೆ. ಸ್ಥಳಾಂತರ ಕಾರ್ಯವು ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಈಗ ದೇವಸ್ಥಾನ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಶೀಘ್ರದಲ್ಲೇ ಇಡೀ ದೇವಾಲಯವು ನಿಗದಿತ ಸ್ಥಳಕ್ಕೆ ಸ್ಥಳಾಂತರವಾಗಲಿದೆ.
![hanuman-temple-moved-back-8-feet-in-shahjahanpur](https://etvbharatimages.akamaized.net/etvbharat/prod-images/up-sjp-01-hanumanmandir-pkg-up10021_31122022143145_3112f_1672477305_1088.jpg)
'ಹನುಮಾನ್ ದೇವಾಲಯದ ಸ್ಥಳಾಂತರ ಕಾರ್ಯ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಿದೆ. ಹರಿಯಾಣದ ಜೈ ದುರ್ಗೆ ಲಿಸ್ಟಿಂಗ್ ಆ್ಯಂಡ್ ಶಿಫ್ಟಿಂಗ್ ಕಂಪನಿಯ ವತಿಯಿಂದ ಕಾರ್ಯ ಪ್ರಗತಿಯಲ್ಲಿದೆ. ಇದೀಗ ಜಾಕ್ ಮಾಡಿ ಹಂತ-ಹಂತವಾಗಿ ಹಿಂದಕ್ಕೆ ಸರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಲ್ಲಿಯವರೆಗೆ ದೇವಸ್ಥಾನ ಸುಮಾರು 8 ಅಡಿ ಹಿಂದೆ ಸರಿದಿದೆ. ದೇವಸ್ಥಾನ ಸಂಪೂರ್ಣ ಸ್ಥಳಾಂತರಗೊಳ್ಳಲು ಇನ್ನೂ 1 ತಿಂಗಳು ಬೇಕು,' ಎಂದು ಎಸ್‌ಡಿಎಂ ತಿಲಹರ್ ರಾಶಿ ಕೃಷ್ಣ ಮಾಹಿತಿ ನೀಡಿದ್ದಾರೆ.
ದೇಶದ ಹಲವೆಡೆ ನಡೆದಿದ್ದ ಮನೆಗಳ ಕಾರ್ಯಾಚರಣೆ.. ಇದೇ ತಂತ್ರಜ್ಞಾನ ಬಳಸಿ ಕರ್ನಾಟಕ ಸೇರಿದಂತೆ ಈಗಾಗಲೇ ದೇಶದ ಹಲವೆಡೆ ಮನೆಗಳನ್ನು ಸ್ಥಳಾಂತರ ಮಾಡಿರುವ ಕಾರ್ಯಾಚರಣೆಗಳು ಯಶಸ್ವಿಯಾಗಿವೆ. ಕಟ್ಟಿದ ಮನೆಗಳನ್ನು ರಸ್ತೆ, ಮಳೆ ನೀರಿನಿಂದ ಮುಕ್ತಿ ಪಡೆಯಲು ರಾಜ್ಯದ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದು, ಅವು ಯಶಸ್ವಿಯಾಗಿವೆ.
ಪಂಜಾಬ್ನಲ್ಲಿ ಕಟ್ಟಿದ ಬೃಹದಾಕಾರದ ಹೊಸ ಮನೆಯನ್ನೇ ವ್ಯಕ್ತಿಯೊಬ್ಬರು ರೈಲ್ವೆ ಮಾರ್ಗದ ಸಲುವಾಗಿ ಜಾಕ್ ಮೂಲಕ ನೂರಾರು ಮೀಟರ್ಗಳವರೆಗೆ ಸ್ಥಳಾಂತರಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ₹1.5 ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ .. ಎಕ್ಸ್ಪ್ರೆಸ್ ವೇಗೋಸ್ಕರ ಮನೆಯನ್ನೇ ಎತ್ತಿ ಪಕ್ಕಕ್ಕೆ ಇರಿಸುತ್ತಿದ್ದಾನೆ ರೈತ