ಸಂಬಲ್‌ಪುರ(ಒಡಿಶಾ): ಬಿಹಾರ, ಪಶ್ಚಿಮ ಬಂಗಾಳ, ದೆಹಲಿಯಲ್ಲಿ ರಾಮನವಮಿ, ಹನುಮ ಜಯಂತಿ ಶೋಭಾಯಾತ್ರೆಯ ಮೇಲೆ ನಡೆದ ದಾಳಿಯ ಬಳಿಕ ಈಗ ಒಡಿಶಾದಲ್ಲೂ ಅಂಥದ್ದೇ ಘಟನೆ ನಡೆದಿದೆ. ಸಂಬಲ್‌ಪುರ ಜಿಲ್ಲೆಯಲ್ಲಿ ಬುಧವಾರ ನಡೆ ಹನುಮ ಜಯಂತಿ ಬೈಕ್ ರ‍್ಯಾಲಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಬಂದ್ ಮಾಡಲಾಗಿದೆ. ಸಂಬಲ್‌ಪುರ ಪಟ್ಟಣದಲ್ಲಿ ನಡೆದ ಗಲಾಟೆಯ ಬಳಿಕ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ 48 ಗಂಟೆಗಳ ಕಾಲ ಈ ನಿಷೇಧ ಮುಂದುವರಿಯುತ್ತದೆ ಎಂದು ಒಡಿಶಾ ಗೃಹ ಇಲಾಖೆ ಹೇಳಿದೆ.
ಸಂಬಲ್‌ಪುರ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆದಿದೆ. ಪರಿಸ್ಥಿತಿ ಗಂಭೀರವಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕದಡಲು ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸಂದೇಶವನ್ನು ಹರಡುತ್ತಿದ್ದಾರೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಮಾಧ್ಯಮಗಳ ಮೂಲಕ ತಪ್ಪು ಸಂದೇಶ ರವಾನೆಯಾಗಿ ಕೆರಳಿಸುವ ಕೆಲಸವಾಗುತ್ತಿದೆ. ಹೀಗಾಗಿ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಲ್‌ಪುರದ ಘಟನೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಧನುಪಾಲಿ ಪೊಲೀಸ್ ಠಾಣೆಯ ಅಧಿಕಾರಿ ಸೇರಿದಂತೆ 15 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಂಬಲ್‌ಪುರ ಪಟ್ಟಣದ ಧನುಪಾಲಿ ಪೊಲೀಸ್ ಠಾಣೆಯಿಂದ ಬೈಕ್ ರ‍್ಯಾಲಿ ಆರಂಭಗೊಂಡು ಮೋತಿಝರನ್ ಚೌಕ್ ದಾಟುತ್ತಿದ್ದಾಗ ಕಲ್ಲು ತೂರಾಟ ನಡೆಸಲಾಗಿತ್ತು. ನಂತರ ಅಲ್ಲಿನ ಆಡಳಿತ ಟೌನ್ ಪೊಲೀಸ್ ಠಾಣೆ, ಧನುಪಾಲಿ, ಖೇತ್ರಾಜಪುರ, ಐಂತಪಾಲಿ, ಬರೇಪಾಲಿ ಮತ್ತು ಸಂಬಲ್‌ಪುರ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
"ಸಂಬಲ್‌ಪುರದ ಎಲ್ಲ 6 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸಾಕಷ್ಟು ಪೊಲೀಸ್ ಪಡೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೆಚ್ಚುವರಿ ಎಸ್‌ಪಿ ತಪನ್ ಮೊಹಂತಿ ಹೇಳಿದ್ದಾರೆ.
ವಡೋದರಾದಲ್ಲಿ ನಡೆದಿದ್ದ ಕಲ್ಲು ತೂರಾಟ: ಗುಜರಾತ್ನ ವಡೋದರಾ ನಗರದಲ್ಲಿ ರಾಮನವಮಿಯ ದಿನದಂದು ಫತೇಹಪುರ ಪ್ರದೇಶದಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಫತೇಹಪುರಾ ಪ್ರದೇಶದಲ್ಲಿ ಮೆರವಣಿಗೆ ಬರುತ್ತಿದ್ದ ವೇಳೆ ಹಠಾತ್ ಘಟನೆ ನಡೆದಿತ್ತು. ಪರಿಸ್ಥಿತಿ ಹದಗೆಡದಂತೆ ಇಡೀ ಪ್ರದೇಶವನ್ನು ಪೊಲೀಸ್ ಪಡೆಗಳು ಹೆಚ್ಚಿನ ಭದ್ರತೆ ನೀಡಿದ್ದರು.
ಇನ್ನೊಂದೆಡೆ ಪಶ್ಚಿಮಬಂಗಾಳದ ಹೂಗ್ಲಿಯಲ್ಲಿ ಬಿಜೆಪಿಯಿಂದ ನಡೆಸಲಾಗಿದ್ದ ಶೋಭಾ ಯಾತ್ರೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದು ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿತ್ತು. ಅಲ್ಲದೇ, ಟಿಎಂಸಿ ಮತ್ತು ಬಿಜೆಪಿ ಮಧ್ಯೆ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿತ್ತು. ಗಲಭೆಕೋರರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ರಾಮನವಮಿ ಆಚರಣೆಯ ವೇಳೆ ಹೌರಾದಲ್ಲಿ ನಡೆದ ಹಿಂಸಾಚಾರದ ನಂತರ, ಪಶ್ಚಿಮ ಬಂಗಾಳ ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಆದೇಶಿಸಿತ್ತು. ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್, ಸಿಐಡಿ ಸುನಿಲ್ ಚೌಧರಿ ನೇತೃತ್ವದ ವಿಶೇಷ ತಂಡ ತನಿಖೆ ಕೈಗೊಂಡಿತ್ತು.
ಓದಿ: ವಿಶಾಖಪಟ್ಟಣಂನಲ್ಲಿ ಮೂರನೇ ಸಲ ವಂದೇ ಭಾರತ್ ರೈಲಿನ ಮೇಲೆ ಕಲ್ಲೇಟು