ಜಲ್ಪೈಗುರಿ (ಪಶ್ಚಿಮ ಬಂಗಾಳ): ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಮನೆಯಲ್ಲಿ ನಿದ್ರಿಸುತ್ತಿದ್ದ ತನ್ನ ಪತ್ನಿ ಹಾಗೂ ಒಂದೂವರೆ ವರ್ಷದ ಮಗಳನ್ನು ಅಮಾನವೀಯವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ. ದುಷ್ಕೃತ್ಯದ ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತರನ್ನು ಸಖಿ ಓನ್ ರಾವ್(27) ಮತ್ತು ಮಮತಾ ಓನ್ ರಾವ್ (18 ತಿಂಗಳು) ಎಂದು ಗುರುತಿಸಲಾಗಿದೆ. ಲಾಲ್ ಸಿಂಗ್ ಓನ್ ರಾವ್ ಕೊಲೆಗೈದ ಆರೋಪಿ. ನಗ್ರಕಟಾ ಪ್ರದೇಶದ ಲುಕ್‌ಸನ್ ಟಿ ಎಸ್ಟೇಟ್ ಲೈನ್ 8ರಲ್ಲಿ ಭಾನುವಾರ ಘಟನೆ ಜರುಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಲಾಲ್ ಸಿಂಗ್ ಎಂಬಾತ ಲುಕ್‌ಸನ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಹೊಂದಿದ್ದ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಭಾನುವಾರ ರಾತ್ರಿ ಕುಡಿದು ಮನೆಗೆ ಬಂದಿದ್ದು ಮನೆಯಲ್ಲಿ ಮಲಗಿದ್ದ ಪತ್ನಿ, ಒಂದೂವರೆ ವರ್ಷದ ಮಗಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ : ಕಿರುಕುಳ ಆರೋಪ: ಇನ್ಸ್ಪೆಕ್ಟರ್ ವಿರುದ್ಧ ರಾಷ್ಟ್ರಪತಿಗೆ ಬರೆದಿದ್ದ ಪತ್ರ ವೈರಲ್
ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ತಾನೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ನೆರೆಹೊರೆ ಜನರು ಗಮನಿಸಿ, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಆರೋಪಿಯನ್ನು ಇಲ್ಲಿನ ಶುಲ್ಕಪಾರ ಪ್ರಾಥಮಿಕ ಆರೋಗ್ಯ ಕೇಂದ್ರ ದಾಖಲಿಸಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
"ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತದೆ. ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಕೃತ್ಯ ಎಸಗಿದ್ದಾನೋ ಅಥವಾ ಇನ್ನಾವುದಾದರೂ ದುರುದ್ದೇಶದಿಂದ ಕೃತ್ಯ ಎಸಗಿದ್ದಾನೋ ಎಂಬುದು ತನಿಖೆಯ ನಂತರ ತಿಳಿದುಬರಲಿದೆ" ಎಂದು ಮಲ್ಬಜಾರ್ ಎಸ್‌ಡಿಪಿಒ ರಬಿನ್ ಥಾಪಾ ಹೇಳಿದರು.
ಇದನ್ನೂ ಓದಿ : ಸಾಕ್ಷಿ ಹೇಳಲು ಬಂದ ಯುವಕನ ಮೇಲೆ ಜಮ್‌ಶೆಡ್‌ಪುರ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ