ಜೈಪುರ (ರಾಜಸ್ಥಾನ): ದೇಶದಲ್ಲಿ ಎಚ್3ಎನ್2 ಸೋಂಕು ಹೊಸ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ರಾಜಸ್ಥಾನದಲ್ಲಿ ಈ ಎಚ್3ಎನ್2 ಸೋಂಕು ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಆಸ್ಪತ್ರೆಗಳಲ್ಲಿ ಜ್ವರ ಮತ್ತು ಶೀತದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ರಾಜಧಾನಿ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ವೈದ್ಯಕೀಯ ಕಾಲೇಜಿನಲ್ಲಿ ಫೆಬ್ರವರಿಯಿಂದ ಇದುವರೆಗೆ ಒಟ್ಟಾರೆ 54 ಎಚ್3ಎನ್2 ಇನ್ಫ್ಲುಯೆನ್ಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಇದನ್ನೂ ಓದಿ: ದೇಶಾದ್ಯಂತ ಹೆಚ್ಚುತ್ತಿರುವ H3N2 ಇನ್‌ಫ್ಲುಯೆಂಜಾ ವೈರಸ್: ದೆಹಲಿಯಲ್ಲಿ ಮಹತ್ವದ ಸಭೆ
ಆಸ್ಪತ್ರೆಯ ಒಪಿಡಿಗೆ ಭೇಟಿ ನೀಡುವ ಪ್ರತಿ ಮೂರನೇ ಅಥವಾ ನಾಲ್ಕನೇ ರೋಗಿಯು ಈ ವೈರಸ್ ಅಥವಾ ಅದಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆದರೂ, ಪ್ರತಿದಿನ ಕೇವಲ 15ರಿಂದ 20 ರೋಗಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎನ್ನಲಾಗಿದೆ.
ಎಚ್3ಎನ್2 ಸೋಂಕು ಜ್ವರ ಲಕ್ಷಣದಿಂದ ಕೂಡಿದೆ. ಆದರೆ, ರೋಗಿಗಳು ಹೆಚ್ಚಾಗಿ ಮೂಗಿನ ದಟ್ಟಣೆ, ಶೀತ, ಗಂಟಲು ನೋವು ಮತ್ತು ಜ್ವರದ ಬಗ್ಗೆ ದೂರು ನೀಡುತ್ತಾರೆ. ಅದರಲ್ಲೂ ಎಚ್3ಎನ್2 ಸೋಂಕು ಹೊಂದಿರುವವರು ದೀರ್ಘಕಾಲದ ಕೆಮ್ಮು ಮತ್ತು ಶೀತದ ಜೊತೆಗೆ ಅತಿ ಹೆಚ್ಚು ಜ್ವರದ ಕುರಿತು ದೂರುತ್ತಿದ್ದು, ಹೆಚ್ಚಿನ ರೋಗಿಗಳು ಸೌಮ್ಯವಾದ ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನುತ್ತಾರೆ ವೈದ್ಯರು.
ಈ ಎಚ್3ಎನ್2 ಸೋಂಕು ಕಾಲೋಚಿತ ವೈರಸ್ ಮತ್ತು ಋತುಮಾನದ ಬದಲಾವಣೆಗಳ ಸಮಯದಲ್ಲಿ ಇಂತಹ ಸೋಂಕುಗಳು ಸಂಭವಿಸುತ್ತವೆ. ಜ್ವರವು ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳವರೆಗೆ ಇರುತ್ತದೆ. ಆದರೂ, ಕೆಲವು ಸಂದರ್ಭಗಳಲ್ಲಿ ಆರರಿಂದ ಏಳು ದಿನಗಳವರೆಗೆ ಜ್ವರ ಕಾಣಿಸಿಕೊಳ್ಳಬಹುದು ಎಂದು ಎಸ್‌ಎಂಎಸ್ ವೈದ್ಯಕೀಯ ಕಾಲೇಜಿನ ಡಾ.ಪುನೀತ್ ಸಕ್ಸೇನಾ ಹೇಳಿದ್ದಾರೆ.
ಮಕ್ಕಳು, ವೃದ್ಧರಿಗೆ ಹೆಚ್ಚು ತೊಂದರೆ: ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗೆ ಸೋಂಕು ತಗುಲಿದ ನಂತರ ಕೆಮ್ಮು ಪ್ರಾರಂಭವಾಗುತ್ತದೆ. ಇದು ಹಲವು ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ನ್ಯುಮೋನಿಯಾ ರೋಗಿಗಳು ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಎಚ್3ಎನ್2 ವೈರಸ್ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕು ಆಗಿದೆ. ಈ ಭಾಗವನ್ನು ಸಾಮಾನ್ಯವಾಗಿ ದೌರ್ಬಲ್ಯಗೊಳಿಸುತ್ತದೆ. ಈ ವೈರಸ್‌ನಿಂದ ಮಕ್ಕಳು ಮತ್ತು ವೃದ್ಧರು ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ ಎಂದು ವೈದ್ಯರು ವಿವರಿಸಿದ್ದಾರೆ.
ಈ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಜನರು ನಿರ್ದಿಷ್ಟ ನಿಯಮಗಳನ್ನು ಪಾಲನೆ ಮಾಡಲೇಬೇಕು. ತಮ್ಮ ಮನೆಗಳ ಹೊರಗೆ ಹೋಗುವಾಗ ಮಾಸ್ಕ್ ಧರಿಸಬೇಕು. ಜನರಿಂದ ಕಿಕ್ಕಿರಿದ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಇತರ ಮುನ್ನೆಚ್ಚರಿಕೆಗಳಲ್ಲಿ ನೀರು ಸೇವನೆ, ಆಗಾಗ್ಗೆ ಕೈ ತೊಳೆಯುವುದು, ಸ್ಯಾನಿಟೈಸರ್‌ಗಳನ್ನು ಬಳಸುವುದು ಮತ್ತು ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವ ಜನರಿಂದ ಸುರಕ್ಷಿತ ಅಂತರವನ್ನು ಇಟ್ಟುಕೊಳ್ಳುವುದು ಮುಖ್ಯ ಎಂದೂ ವೈದ್ಯರು ಹೇಳುತ್ತಾರೆ.
ಕೊಮೊರ್ಬಿಡಿಟಿ (ಒಂದೇ ಸಲಕ್ಕೆ ಎರಡಕ್ಕಿಂತ ಹೆಚ್ಚಿನ ಕಾಯಿಲೆಗಳು)ಯಿಂದ ಬಳಲುತ್ತಿರುವ ಜನರು ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕು. ಸಾಮಾನ್ಯ ಔಷಧಿಗಳನ್ನು ತೆಗೆದುಕೊಳ್ಳುವ ಬದಲು, ಇಂತಹ ರೋಗಿಗಳು ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 524 ಕೋವಿಡ್-19 ಪ್ರಕರಣ: 113 ದಿನಗಳಲ್ಲಿ ಅತ್ಯಧಿಕ