ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪತ್ತೆಯಾದ ಶಿವಲಿಂಗಕ್ಕೆ ಪೊಲೀಸ್ ಭದ್ರತೆ ನೀಡಿ, ಅಲ್ಲದೇ ಮಸೀದಿಯಲ್ಲಿ ಪ್ರಾರ್ಥನೆಗೆ ಅಡ್ಡಿಯಾಗಕೂಡದು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ತಾಕೀತು ಮಾಡಿದೆ.
ಸರ್ವೇ ಕಾರ್ಯ ಮತ್ತು ವರದಿಯನ್ನು ತಡೆ ಹಿಡಿಯಬೇಕು ಎಂದು ಕೋರಿ ಅಂಜುಮನ್ ಇಂತೇಜಾಮಿಯಾ ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿದ ಅರ್ಜಿ ಮತ್ತು ಮಸೀದಿಯ ಅರ್ಜಿಯನ್ನು ವಜಾ ಮಾಡುವಂತೆ ಹಿಂದೂ ಸೇನೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮಸೀದಿಯ ಪರವಾಗಿ ವಾದ ಮಂಡಿಸಿದ ಹಿರಿಯ ಅಡ್ವೋಕೇಟ್ ಹುಜೀಫಾ ಅಹಮದಿ ಅವರು ಮಸೀದಿಯನ್ನು ರಕ್ಷಣೆ ಮಾಡಬೇಕು ಎಂದು ಕೋರಿದರು. ಈ ವೇಳೆ ಕೋರ್ಟ್ ಮಸೀದಿ ಸರ್ವೇ ನಡೆಸಿದಾಗ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಉತ್ತರಪ್ರದೇಶ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಇದನ್ನು ಕೋರ್ಟ್ ನೇಮಿಸಿದ ಕಮಿಷನರ್ಗಳೂ ನೋಡಿದ್ದಾರೆ ಎಂದು ಉತ್ತರಿಸಿದರು.
ಹಾಗಾದರೆ, ಪತ್ತೆಯಾದ ಶಿವಲಿಂಗಕ್ಕೆ ಸದ್ಯಕ್ಕೆ ರಕ್ಷಣೆ ಕೊಡಿ ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಸೂಚಿಸಿದ ಕೋರ್ಟ್, ಇದಕ್ಕಾಗಿ ಸಿಆರ್ಪಿಎಫ್ ತುಕಡಿಯನ್ನು ನೇಮಿಸಿ ಎಂದು ಎಂದಿದೆ. ಅಲ್ಲದೇ, ಮಸೀದಿಯಲ್ಲಿ ಪ್ರಾರ್ಥನೆಗೆ ಯಾವುದೇ ರೀತಿಯ ಅಡ್ಡಿ ಉಂಟಾಗಬಾರದು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ವಿರೋಧ ವ್ಯಕ್ತಪಡಿಸಬಾರದು ಎಂದು ತಿಳಿಸಿ, ವಿಚಾರಣೆಯನ್ನು ಗುರುವಾರಕ್ಕೆ(ಮೇ 19) ಮುಂದೂಡಿದೆ.
2 ದಿನದಲ್ಲಿ ವರದಿ ನೀಡಿ: ಇನ್ನು ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯ ಮುಗಿದಿದ್ದು, ಈ ಬಗ್ಗೆ ವಿಸ್ತೃತ ವರದಿ ಸಲ್ಲಿಸಲು ವಾರಾಣಸಿ ಕೋರ್ಟ್ 2 ದಿನ ಕಾಲಾವಕಾಶ ನೀಡಿದೆ. ವರದಿಗಾಗಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಎರಡೇ ದಿನದಲ್ಲಿ ನೀಡಲು ಕೋರ್ಟ್ ಕಟ್ಟಪ್ಪಣೆ ಮಾಡಿದೆ.
ಕೋರ್ಟ್ ಕಮಿಷನರ್ ವಜಾ: ಮತ್ತೊಂದು ಬೆಳವಣಿಗೆಯಲ್ಲಿ ಜ್ಞಾನವಾಪಿ ಸರ್ವೇ ಕಾರ್ಯ ನಡೆಸಲು ವಾರಾಣಸಿ ಕೋರ್ಟ್ ಇಬ್ಬರು ಕಮಿಷನರ್ಗಳನ್ನು ನೇಮಕ ಮಾಡಿತ್ತು. ಇವರಲ್ಲಿ ಒಬ್ಬರಾದ ಅಜಯ್ ಮಿಶ್ರಾ ಮಾಧ್ಯಮಗಳಿಗೆ ಸರ್ವೇ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ವಜಾ ಮಾಡಲಾಗಿದೆ. ಮಿಶ್ರಾರ ವಜಾಕ್ಕೆ ವಾರಾಣಸಿ ಕೋರ್ಟ್ ಆದೇಶಿಸಿದೆ.
ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಸರ್ವೆ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ ಕೋರ್ಟ್ ಸಮಿತಿ