ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣದ ಗದ್ದಲದ ನಡುವೆಯೇ ಹಿಂದೂ ಸಂತರೊಬ್ಬರು ಶಿವಲಿಂಗವನ್ನು ಪೂಜಿಸಲು ಮಸೀದಿ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಪ್ರಕರಣ ಇನ್ನೂ ಬಗೆಹರಿಯದ ಹಿನ್ನೆಲೆ ಪೊಲೀಸರು ಅವರನ್ನು ಒಳಹೋಗದಂತೆ ತಡೆದಿದ್ದಾರೆ. ಶಿವಲಿಂಗಕ್ಕೆ ಪೂಜೆ ಮಾಡದಂತೆ ತಡೆಹಿಡಿದ ಬೆನ್ನಲ್ಲೇ, ಪೂಜೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಹಿಂದೂ ಸಂತ ಅಲ್ಲೇ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಧರಣಿ ಕುಳಿತಿರುವ ಘಟನೆ ನಡೆದಿದೆ.
ಶೃಂಗಾರ್ ಗೌರಿ - ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ದಾವೆದಾರರ ಪ್ರಕಾರ, ಕಳೆದ ತಿಂಗಳು ನ್ಯಾಯಾಲಯದ ಆದೇಶದಂತೆ ಆವರಣದ ಸರ್ವೇ ನಡೆಸಲಾಗಿತ್ತು. ಸರ್ವೇ ಇನ್ನೂ ಸಂಕೀರ್ಣ ಸ್ಥಿತಿಯಲ್ಲಿರುವಾಗಲೇ, ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಜ್ಞಾನವಾಪಿ ಆವರಣಕ್ಕೆ ತೆರಳಿ ಹೋಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುವುದಾಗಿ ಘೋಷಿಸಿದ್ದರು.
ಗುರುವಾರ ತಾವು ಮತ್ತು ಅನುಯಾಯಿಗಳು ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುವುದಾಗಿ ಘೋಷಿಸಿದ್ದ ಅವರು ಒಂದು ವೇಳೆ ಆಡಳಿತ ನಾವು ಪ್ರಾರ್ಥನೆ ಮಾಡುವುದನ್ನು ತಡೆದರೆ, ಆ ಕುರಿತು ಶಂಕರಾಚಾರ್ಯರಿಗೆ ತಿಳಿಸಿ ಅವರು ಹೇಳಿದ ಸೂಚನೆಗಳಂತೆ ನಾವು ಮುಂದುವರಿಯುತ್ತೇವೆ ಎಂದು ಹೇಳಿದ್ದರು.
ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ - ಕಾಶಿ ವಿಶ್ವನಾಥ ದೇವಸ್ಥಾನದ ವಿವಾದದಲ್ಲಿ ಫಿರ್ಯಾದಿಗಳು ಸಲ್ಲಿಸಿದ ಮೊಕದ್ದಮೆಯ ನಿರ್ವಹಣೆ ಪ್ರಶ್ನಿಸಿ ಪ್ರತಿವಾದಿಗಳು (ಅಂಜುಮನ್ ಇಸ್ಲಾಮಿಯಾ ಸಮಿತಿ ಸೇರಿದಂತೆ) ಸಲ್ಲಿಸಿದ ಆದೇಶ 7 ನಿಯಮ 11 CPC ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಅರ್ಜಿ ವಿಚಾರಣೆ ಜುಲೈ 4ಕ್ಕೆ ಮುಂದೂಡಿಕೆ