ವಾರಾಣಸಿ: ಭಾರಿ ವಿವಾದ ಸೃಷ್ಟಿಸಿರುವ ವಾರಾಣಸಿಯ ಗ್ಯಾನವಾಪಿ ಮಸೀದಿಯ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಮುಂದುವರಿಸಿ, ಮೇ 17 ರೊಳಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಈ ಮಧ್ಯೆ ಸುಪ್ರೀಂಕೋರ್ಟ್ ಸಹ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇರ್ಶಿಸಲು ಕೋರಿದ್ದ ಅರ್ಜಿಯನ್ನ ತಳ್ಳಿಹಾಕಿದೆ.
ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಾಧೀಶರು: ಈ ನಡುವೆ ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯ ಹೆಚ್ಚುವರಿಯಾಗಿ ಇಬ್ಬರು ಆಯುಕ್ತರನ್ನು ನೇಮಿಸಿದೆ. ನ್ಯಾಯಾಲಯ ನೇಮಕ ಮಾಡಿರುವ ಮೂವರು ಆಯುಕ್ತರೊಂದಿಗೆ ಸಮೀಕ್ಷೆಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಈ ನಡುವೆ ಸಮೀಕ್ಷೆ ನಡೆಸುವಂತೆ ತೀರ್ಪು ನೀಡಿರುವ ಸಿವಿಲ್ ಜಡ್ಜ್, ಭದ್ರತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅತ್ಯಂತ ಶಾಂತಿಯುತವಾಗಿ ಹಾಗೂ ಸಾಮಾನ್ಯ ವ್ಯಾಜ್ಯದ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಿರುವುದು ಆತಂಕಕಾರಿ ವಿಷಯ. ಈ ವಿಷಯದಿಂದಾಗಿ ಈಗ ನನ್ನ ಮನೆಯವರೂ ಆತಂಕದಲ್ಲಿದ್ದಾರೆ. ನನ್ನ ಸುರಕ್ಷತೆಯೇ ಅವರಿಗೆ ದೊಡ್ಡ ಚಿಂತೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆ ಕುರಿತಂತೆ ಕಮಿಷನರ್ ಹೇಳಿದ್ದೇನು? ನ್ಯಾಯಾಲಯದಿಂದ ನೇಮಕಗೊಂಡಿರುವ ಕಮಿಷನರ್ ಅಜಯ್ ಪ್ರತಾಪ್ ಸಿಂಗ್, ಸಮೀಕ್ಷೆಗೆ ಸಿದ್ಧತೆಗಳು ಪೂರ್ಣಗೊಂಡಿವೆ ಎಂದಿದ್ದಾರೆ. ಮೇ 14 ಮತ್ತು 15 ರಂದು ವೀಡಿಯೋಗ್ರಫಿ ನಡೆಯಲಿದೆ. ಇದಾದ ಬಳಿಕ ಮೇ 17ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಕ್ಕಾಗಿ ಆಯೋಗ ನೇಮಕ ಮಾಡಿರುವ ತಂಡ ಮಸೀದಿಗೆ ತೆರಳಲಿದ್ದು, ಇದರಲ್ಲಿ ಎರಡೂ ಕಡೆಯ ವಕೀಲರು, ಫಿರ್ಯಾದುದಾರರು ಹಾಗೂ ಪೊಲೀಸರು ಇರಲಿದ್ದಾರೆ ಎಂದು ತಿಳಿಸಿದರು. ಇಡೀ ಮಸೀದಿಯನ್ನು ಸರ್ವೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ನಿಷ್ಪಕ್ಷಪಾತ ತನಿಖೆ: ಈ ಹಿಂದೆ ನ್ಯಾಯಾಲಯದಿಂದ ನೇಮಕವಾಗಿದ್ದ ಆಯುಕ್ತ ಎ.ಕೆ.ಮಿಶ್ರಾ ವಿರುದ್ಧದ ಆರೋಪದ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸಮೀಕ್ಷೆಯಲ್ಲಿ ತಾರತಮ್ಯ ತೋರುವುದಿಲ್ಲ ಎಂದು ಹೇಳಿದರು. ಇದೊಂದು ಸರಳವಾದ ಪ್ರಕರಣವಾಗಿದ್ದು, ನ್ಯಾಯಯುತವಾಗಿ ಸಮೀಕ್ಷೆ ನಡೆಸಲಿದ್ದು ಎಲ್ಲ ಪ್ರಕ್ರಿಯೆಗಳು ಕೋರ್ಟ್ನ ಕಣ್ಗಾವಲಿನಲ್ಲೇ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ; ಈ ವಿಷಯ ತೀರಾ ಸಹಜವಾಗಿದ್ದರೂ ಭಯದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ, ಸಹಜವಾಗಿಯೇ ನಮ್ಮ ಕುಟುಂಬ ಮತ್ತು ನಾವೆಲ್ಲರೂ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತೇವೆ. ಈ ನಡುವೆ ಕೋರ್ಟ್ ನೇಮಕ ಮಾಡಿರುವ ಆಯೋಗ ಹಾಗೂ ಆಯುಕ್ತರ ಬಗ್ಗೆ ವಿರೋಧ ವ್ಯಕ್ತವಾಗಿರುವುದರಿಂದ ಈ ಆತಂಕ ವ್ಯಕ್ತವಾಗಿದೆ.
ಈ ಕುರಿತು ಜಿಲ್ಲಾಡಳಿತದೊಂದಿಗೆ ಎಲ್ಲರೂ ಮಾತುಕತೆ ನಡೆಸಿದ್ದೇವೆ. ಆಡಳಿತದಿಂದ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. ಸರ್ವೆ ಮಾಡಲು ನಾವೆಲ್ಲರೂ ಸರ್ವ ಭದ್ರತೆಯೊಂದಿಗೆ ಮಸೀದಿಗೆ ತೆರಳುತ್ತೇವೆ. ಮೂವರು ಆಯುಕ್ತರು ಸೇರಿದಂತೆ 38 ಸದಸ್ಯರು ಸಮೀಕ್ಷಾ ಪ್ರಕ್ರಿಯೆಯಲ್ಲಿ ಹಾಜರಿರುತ್ತಾರೆ.
ಸರ್ವೇ ವೇಳೆ ಯಾರೆಲ್ಲ ಇರುತ್ತಾರೆ: ಇದರಲ್ಲಿ ಐದು ಫಿರ್ಯಾದಿದಾರ ಮಹಿಳೆಯರು, ಪೊಲೀಸರು, ಕಮಿಷನರ್, ಅಂಜುಮನ್ ಇನಾಝನಿಯಾ ಸಮಿತಿ ಮತ್ತು ಕೇಂದ್ರ ಸುನ್ನಿ ವಕ್ಫ್ ಮಂಡಳಿಯಿಂದ ತಲಾ ಮೂವರು ಸದಸ್ಯರು ಉಪಸ್ಥಿತರಿರುತ್ತಾರೆ. ಇದರೊಂದಿಗೆ, ನ್ಯಾಯಾಲಯದ ಕಮಿಷನರ್ ಅವರೊಂದಿಗೆ ಅವರ ಇತರ ಇಬ್ಬರು ವಕೀಲರು ಸಹ ಇರುತ್ತಾರೆ. ಇದಲ್ಲದೇ ವಿಡಿಯೋಗ್ರಾಫರ್, ಛಾಯಾಗ್ರಾಹಕ ಮತ್ತು ಕ್ಯಾಮರಾಮನ್ ಕೂಡಾ ಸಮೀಕ್ಷೆ ವೇಳೆ ಇರಲಿದ್ದಾರೆ.
ಇದನ್ನು ಓದಿ:ರಾಜ್ ಠಾಕ್ರೆ- ಓವೈಸಿ ಟಾಕ್ ಫೈಟ್ : ಮುಸ್ಲಿಂ ಸಮುದಾಯ ಗಟ್ಟಿಗೊಳ್ಳಲು ಓವೈಸಿ ಕರೆ