ಗುರುಗ್ರಾಮ (ಹರಿಯಾಣ): ಮಾಜಿ ಮಾಡೆಲ್ ದಿವ್ಯಾ ಪಹುಜಾ ಕೊಲೆ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಗುರುಗ್ರಾಮ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಭಿಜಿತ್ ಸಿಂಗ್ ಸೇರಿದಂತೆ ಐವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಬುಧವಾರ ಗುರುಗ್ರಾಮದಲ್ಲಿ ನಡೆದ ಈ ಕೊಲೆ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.
ದಿವ್ಯಾ ಪಹುಜಾ ಈಗಾಗಲೇ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು, ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದರು. ಮಂಗಳವಾರ ರಾತ್ರಿ ಅಭಿಜೀತ್ ಸಿಂಗ್ ಅವರನ್ನು ಹೋಟೆಲ್ ಕೋಣೆಗೆ ಕರೆದೊಯ್ದು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಹೋಟೆಲ್ ಮಾಲೀಕನಿಗೆ ಕೆಲ ಅಶ್ಲೀಲ ಫೋಟೋಗಳನ್ನು ಹಾಕಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಅದಕ್ಕಾಗಿಯೇ ಅಭಿಜಿತ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಆರೋಪಗಳನ್ನು ದಿವ್ಯಾ ಕುಟುಂಬಸ್ಥರು ಅಲ್ಲಗಳೆದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಅಭಿಜಿತ್ ಸಿಂಗ್ ಮತ್ತು ಹೋಟೆಲ್‌ನ ಮೂವರು ಸಿಬ್ಬಂದಿ ಪೊಲೀಸ್ ವಶದಲ್ಲಿದ್ದು, ಕೂಲಂಕಷ ವಿಚಾರಣೆ ನಡೆಸಲಾಗುತ್ತಿದೆ. ಮೃತದೇಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಹೋಟೆಲ್ನಿಂದ ಎಳೆದೊಯ್ಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅಭಿಜಿತ್ ಸಿಂಗ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ, ದಿವ್ಯಾ ಸಹೋದರಿ ನೈನಾ ಪಹುಜಾ ಪೊಲೀಸ್ ದೂರಿನಲ್ಲಿ ವಿವಿಧ ಆರೋಪಗಳನ್ನು ಮಾಡಿದ್ದಾರೆ. ಸಂದೀಪ್ ಗಡೋಲಿ ಅವರ ಸಹೋದರಿ ಸುದೇಶ್ ಕಟಾರಿಯಾ ಮತ್ತು ಸಹೋದರ ಬ್ರಹ್ಮ ಪ್ರಕಾಶ್ ಅವರು ಅಭಿಜಿತ್ ಜೊತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
2016ರ ಫೆಬ್ರವರಿ 6ರಂದು ಮುಂಬೈನಲ್ಲಿ ನಡೆದ ಶೂಟೌಟ್‌ನಲ್ಲಿ ಗ್ಯಾಂಗ್‌ಸ್ಟರ್ ಗಡೋಲಿ ಸಾವನ್ನಪ್ಪಿದ್ದರು. ಆದರೆ, ನಂತರ ಮುಂಬೈ ಪೊಲೀಸರು ಇದೊಂದು ನಕಲಿ ಎನ್‌ಕೌಂಟರ್ ಎಂದು ಘೋಷಿಸಿದ್ದರು. ಆರೋಪಿಯು ಗೆಳತಿ ದಿವ್ಯಾ ಪಹುಜಾ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ದಿವ್ಯಾ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.