ವಲ್ಸಾದ್(ಗುಜರಾತ್): ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಹೀರೋ ಎಂದು ಬಿಂಬಿಸಿ ಭಾಷಣ ಮಾಡಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ ನೀಡಿದ್ದು, ಗುಜರಾತ್ನಲ್ಲಿ ವಿವಾದವೆಬ್ಬಿಸಿದೆ.
ಗುಜರಾತ್ನ ವಲ್ಸಾದ್ ಎಂಬಲ್ಲಿನ ಶಾಲೆಯೊಂದರಲ್ಲಿ ಜಿಲ್ಲಾ ಯುವಜನ ಅಭಿವೃದ್ಧಿ ಅಧಿಕಾರಿಗಳ ಕಛೇರಿಯಿಂದ ಪ್ರತಿಭಾನ್ವೇಷಣೆ ಸ್ಪರ್ಧೆ ನಡೆಸಲಾಗಿದೆ. ಇದರಲ್ಲಿ ಗಾಂಧೀಜಿಯನ್ನು ಟೀಕಿಸಿ, ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ವಿದ್ಯಾರ್ಥಿಗೆ ಪ್ರಥಮ ಬಹುಮಾನ ನೀಡಲಾಗಿದೆ. ಇದೀಗ ಗುಜರಾತ್ನಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ತನಿಖೆಗೆ ಸೂಚಿಸಿದ ಶಿಕ್ಷಣಾಧಿಕಾರಿ: ವಲ್ಸಾದ್‌ನ ಕುಸುಮ್ ಶಾಲೆಯಲ್ಲಿ ನಾಥೂರಾಂ ಗೋಡ್ಸೆಯ ವಿಷಯವನ್ನು ಆಯ್ಕೆ ಮಾಡಿಕೊಂಡು ಭಾಷಣ ಮಾಡಲು ಅವಕಾಶ ನೀಡಿದ್ದರ ವಿರುದ್ಧ ಅಲ್ಲಿನ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ, ಗಾಂಧೀಜಿಯನ್ನು ತೆಗಳಿ ನಾಥೂರಾಂ ಗೋಡ್ಸೆಯನ್ನು ಹೀರೋ ಎಂದು ಬಿಂಬಿಸಿ ಭಾಷಣ ಮಾಡಿದ ವಿದ್ಯಾರ್ಥಿಗೆ ಮೊದಲ ಬಹುಮಾನ ನೀಡಿದ ಬಗ್ಗೆ ಶಾಲೆಯಿಂದ ಸ್ಪಷ್ಟನೆ ಕೇಳಿದ್ದಾರೆ. ಇದೇ ವೇಳೆ ಭಾಷಣ ಸ್ಪರ್ಧೆ ಆಯೋಜಿಸಿದ್ದ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆ ವಿರುದ್ಧ ಕಾಂಗ್ರೆಸ್ ಟೀಕೆ: ವಲ್ಸಾದ್‌ನ ಕುಸುಮ್ ವಿದ್ಯಾಲಯದಲ್ಲಿ ನಡೆದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ನನ್ನ ಆದರ್ಶ ಗೋಡ್ಸೆಗೆ ಭಾಷಣಕ್ಕೆ ಪ್ರಥಮ ಬಹುಮಾನಿ ನೀಡಿದ್ದರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ರಾಜ್ಯ ವಕ್ತಾರ ಮನೀಶ್ ದೋಷಿ, ವಲ್ಸಾದ್ ಶಾಲೆಯ ವಿವಾದ ಅತ್ಯಂತ ಖಂಡನೀಯ. ಮಹಾತ್ಮ ಗಾಂಧೀಜಿಯನ್ನು ಭಾರತದ ದುರ್ಬಲ ನಾಯಕ ಎಂದು ಬಿಂಬಿಸುವ ಮೂಲಕ ಗೋಡ್ಸೆಯನ್ನು ಹೀರೋ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇದು ಮಕ್ಕಳ ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಟೀಕಿಸಿದ್ದಾರೆ.
ಇದರ ಹಿಂದೆ ಆರ್ಎಸ್ಎಸ್, ಬಿಜೆಪಿಯ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕಪಡಿಸಿರುವ ಕಾಂಗ್ರೆಸ್ ಮುಖಂಡ ಮಕ್ಕಳನ್ನು ಗಾಂಧಿ ಸಿದ್ಧಾಂತದಿಂದ ದೂರವಿಡಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಓದಿ: ಮಂಜುಗಡ್ಡೆ ರಸ್ತೆಯಲ್ಲಿ 16 ಕಿ.ಮೀ ಕಾಲ್ನಡಿಗೆ ಮೂಲಕ ವೃದ್ಧನನ್ನ ಆಸ್ಪತ್ರೆಗೆ ಕರೆತಂದ ಜನರು