ಅಹಮದಾಬಾದ್: ಡಿಸೆಂಬರ್ 8ರ ದಿನ ಗುಜರಾತ್ ರಾಜ್ಯಕ್ಕೆ ಐತಿಹಾಸಿಕ ದಿನವಾಗಿದೆ. ಇದೇ ದಿನ 2022ರ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು, ಕಾಂಗ್ರೆಸ್ 17 ಮತ್ತು ಆಮ್ ಆದ್ಮಿ ಪಕ್ಷ 5 ಸ್ಥಾನಗಳನ್ನು ಗೆದ್ದಿದೆ.
ಏಳನೇ ಬಾರಿಗೆ ಬಿಜೆಪಿ ಜಯಭೇರಿ: ಈ ಗೆಲುವಿನೊಂದಿಗೆ ಬಿಜೆಪಿ 7ನೇ ಬಾರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಶೇ 52.5, ಕಾಂಗ್ರೆಸ್ ಶೇ 27.3 ಮತ್ತು ಆಮ್ ಆದ್ಮಿ ಪಕ್ಷ ಶೇ 12.92 ಮತಗಳನ್ನು ಗಳಿಸಿವೆ. ಇದರಲ್ಲಿ ಪಾಟಿದಾರ್ ಸಮುದಾಯ ಪ್ರಾಬಲ್ಯದ 61 ಸ್ಥಾನಗಳ ಪೈಕಿ 55 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿರುವುದು ವಿಶೇಷವಾಗಿದೆ.
ಪಾಟಿದಾರ್ ಸಮುದಾಯದ ಪ್ರಾಬಲ್ಯವಿರುವ 61 ಸ್ಥಾನಗಳ ಪೈಕಿ ಬಿಜೆಪಿ 55 ಸ್ಥಾನಗಳನ್ನು ಗೆದ್ದಿದೆ. ಎಎಪಿಯ ಐವರು ಜಯಶಾಲಿ ಅಭ್ಯರ್ಥಿಗಳ ಪೈಕಿ ಇಬ್ಬರು ಪಾಟಿದಾರ್ ಆಗಿದ್ದಾರೆ. ಆಪ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ಪಾಟಿದಾರ್ ಸಮುದಾಯದ ಮೂವರು ಪ್ರಮುಖ ನಾಯಕರಾದ ಅಲ್ಪೇಶ್ ಕಥಿರಿಯಾ, ಗೋಪಾಲ್ ಇಟಾಲಿಯಾ ಮತ್ತು ರಿತಿಯಾ ಮಾಳವಿಯಾ ಸೋತಿದ್ದಾರೆ. ಮತ್ತೊಂದೆಡೆ ಆಪ್ ಪಕ್ಷದ ಮುಖ್ಯಮಂತ್ರಿ ಯೇಸುದಾನ ಗಧ್ವಿ ಕೂಡ ಸೋತು ಸುಣ್ಣವಾಗಿದ್ದಾರೆ.
2017ರಲ್ಲಿ ಬಿಜೆಪಿಗೆ ಗೆಲುವು ಕಷ್ಟವಾಗಿತ್ತು: 2017ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ತುಂಬಾ ಕಷ್ಟವಾಗಿತ್ತು. ಆಗ ಪಾಟಿದಾರ್ ಚಳವಳಿಯಿಂದ ಬಿಜೆಪಿ ಸಾಕಷ್ಟು ನಷ್ಟ ಅನುಭವಿಸಿತ್ತು. ಆ ವೇಳೆ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರು.
2017 ರ ಚುನಾವಣೆಯಲ್ಲಿ ಪಾಟಿದಾರ್ ಚಳವಳಿಯ ಪರಿಣಾಮದಿಂದ ಕಾಂಗ್ರೆಸ್ 30 ಸ್ಥಾನಗಳನ್ನು, ಬಿಜೆಪಿ 23 ಮತ್ತು ಎನ್ಸಿಪಿ 1 ಸ್ಥಾನ ಪಡೆದುಕೊಂಡಿದ್ದವು. ಆದರೆ 2022 ರಲ್ಲಿ ಬಿಜೆಪಿಯ ಮತ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟ ಪಾಟಿದಾರ್ ಸಮುದಾಯವು ಮತ್ತೆ ಬಿಜೆಪಿಯ ಬೆಂಬಲಕ್ಕೆ ಬಂದಿದೆ.
ಇದನ್ನೂ ಓದಿ: ಸೂರತ್ನಲ್ಲಿ ಪಿಎಂ ಮೋದಿ ಪ್ರಚಾರ: ಡೈಮಂಡ್ ವ್ಯಾಪಾರಿಗಳು, ಪಾಟಿದಾರ್ ಮುಖಂಡರ ಭೇಟಿ