ಅಹಮದಾಬಾದ್ (ಗುಜರಾತ್): ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಗುಜರಾತ್ ಹೈಕೋರ್ಟಿನ ಆದೇಶದ ಮೇರೆಗೆ ರಾಷ್ಟ್ರೀಯ ಲೋಕ ಅದಾಲತ್ ಅಧಿಕಾರಿಗಳು ಶನಿವಾರ 5.40 ಕೋಟಿ ರೂಪಾಯಿ ಪರಿಹಾರ ಕೊಡಿಸಿದ್ದಾರೆ. ಇದು ಅತಿ ಹೆಚ್ಚು ಮೋಟಾರ್ ಕ್ಲೇಮ್ ಇತ್ಯರ್ಥವಾಗಿದೆ.
ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ, ಹೈಕೋರ್ಟ್ ಕಾನೂನು ಸೇವಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಮತ್ತು ಕಾರ್ಯದರ್ಶಿ ಬಿ ಎಚ್ ಘಸುರ ಅವರು ಈ ಆದೇಶ ಹೊರಡಿಸಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ ಇಫ್ಕೋ ಟೋಕಿಯೊ ಕಂಪನಿಯು 5.40 ಕೋಟಿ ರೂಪಾಯಿ ನೀಡಿದೆ.
ಪರಿಹಾರ ನೀಡಿದ್ದೇಕೆ?: 2014ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭರೂಚ್‌ನ ಪ್ರಕಾಶ್‌ಭಾಯ್ ವಘೇಲಾ ಎಂಬುವರು ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಡೋದರಾಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ನರೋಲ್ ಟೋಲ್ ಪ್ಲಾಜಾದಲ್ಲಿ ಹೋಗುತ್ತಿದ್ದಾಗ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಮೃತರ ಕುಟುಂಬ ಸದಸ್ಯರು ವಿಮಾ ಕಂಪನಿಯ ವಿರುದ್ಧ ಮೋಟಾರ್ ಕ್ಲೈಮ್ಸ್ ಟ್ರಿಬ್ಯೂನಲ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೃತ ಪ್ರಕಾಶಭಾಯಿ ವಘೇಲಾ ಅವರು ಬಿ.ಟೆಕ್ ಪದವೀಧರರಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ಅಪಘಾತದ ವೇಳೆ ಅವರಿಗೆ ವಾರ್ಷಿಕ ಪ್ಯಾಕೇಜ್ 31 ಲಕ್ಷ ರೂಪಾಯಿ ಸಂಬಳವಿತ್ತು.
ಮೃತ ವ್ಯಕ್ತಿಗೆ ಪತ್ನಿ, ಇಬ್ಬರು ಅಪ್ರಾಪ್ತ ಪುತ್ರರು ಮತ್ತು ಪೋಷಕರು ಇದ್ದರು. ಎಲ್ಲರೂ ವಘೇಲಾ ಅವರ ಆದಾಯದ ಮೇಲೆ ಅವಲಂಬಿತರಾಗಿದ್ದರು. ಅಪಘಾತದಲ್ಲಾದ ಸಾವಿನಿಂದಾಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು.
ಮೃತ ವಘೇಲಾ ಅವರ ಕುಟುಂಬಸ್ಥರು 2014 ರಲ್ಲಿ ವಾಹನ ಅಪಘಾತದ ವಿಮಾ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೋಟಾರ್ ಕ್ಲೈಮ್ಸ್ ಟ್ರಿಬ್ಯೂನಲ್, ಶೇಕಡಾ 9 ರ ಬಡ್ಡಿದರಲ್ಲಿ 6.31 ಕೋಟಿ ರೂ.ಗಳ ಪರಿಹಾರ ನೀಡುವಂತೆ ಸೂಚಿಸಿತು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕಂಪನಿ ವಾದ ಮಂಡಿಸಿತ್ತು. ಹಲವು ಸುತ್ತಿನ ಮಾತುಕತೆ ಬಳಿಕ ವಿಮಾ ಕಂಪನಿ ಸಂತ್ರಸ್ತ ಕುಟುಂಬಕ್ಕೆ 5.40 ಕೋಟಿ ರೂಪಾಯಿ ಪಾವತಿಸಲು ಒಪ್ಪಿಕೊಂಡಿತ್ತು.
ಸಂತ್ರಸ್ತೆಯ ಕುಟುಂಬದ ಪರವಾಗಿ ವಕೀಲ ಹಿರೇನ್ ಮೋದಿ ವಾದ ಮಂಡಿಸಿದ್ದರು. ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಮಾ ಕಂಪನಿಯು ನಾಲ್ಕು ವಾರಗಳಲ್ಲಿ ಪರಿಹಾರ ಮೊತ್ತವನ್ನು ಕುಟುಂಬದ ಖಾತೆಗೆ ಠೇವಣಿ ಮಾಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಸ್ಪರ್ಧೆ ವೇಳೆ ಮುಳುಗಿದ ಹಡಗು: ಅಪಾಯದಲ್ಲಿದ್ದ 20 ಜನರ ರಕ್ಷಿಸಿದ ಭಾರತೀಯ ನೌಕಾಪಡೆ