ಅಹಮದಾಬಾದ್: ನಾಳೆ (ಗುರುವಾರ) ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 152 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 89 ಸ್ಥಾನಗಳಲ್ಲಿ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ 89 ಸ್ಥಾನಗಳ ಪೈಕಿ 42 ರಲ್ಲಿ 152 ಮುಸ್ಲಿಂ ಅಭ್ಯರ್ಥಿಗಳು ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
152 ಮುಸ್ಲಿಂ ಅಭ್ಯರ್ಥಿಗಳ ಪೈಕಿ 36 ಮಂದಿ ಸೂರತ್‌ನ ಲಿಂಬಾಯತ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 17 ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಓರ್ವ ಮುಸ್ಲಿಂ ಅಭ್ಯರ್ಥಿ ಕಣದಲ್ಲಿದ್ದಾರೆ. ಹಾಗೆಯೇ ಇಬ್ಬರು ಮುಸ್ಲಿಂ ಅಭ್ಯರ್ಥಿಗಳಿರುವ ಐದು ಸ್ಥಾನಗಳಿವೆ. ಆರು ಸ್ಥಾನಗಳಲ್ಲಿ ತಲಾ ಮೂವರು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನಾಲ್ಕು ಸ್ಥಾನಗಳಲ್ಲಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಲಾ ಐದು ಸ್ಥಾನಗಳಲ್ಲಿ ಆರು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಮೊದಲ ಹಂತದಲ್ಲಿ ಕಣದಲ್ಲಿರುವ ಒಟ್ಟು ಮುಸ್ಲಿಂ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 14. ಒಟ್ಟು 117 ಮುಸ್ಲಿಂ ಅಭ್ಯರ್ಥಿಗಳು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಮೊದಲ ಹಂತದ ಚುನಾವಣೆಗೆ ಮೂವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ, ಅಸಾದುದ್ದೀನ್ ಓವೈಸಿಯ ಆಲ್ ಇಂಡಿಯಾ ಮಜ್ಲಿಸ್ ಇತಿಹಾದುಲ್ ಮುಸ್ಲಿಮೀನ್ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಎಎಪಿ ಓರ್ವ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಬಿಎಸ್‌ಪಿ ಮತ್ತು ಎಸ್‌ಪಿ ಕೂಡ ತಲಾ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಮೊದಲ ಹಂತದಲ್ಲಿ 2,39,76,670 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣಾ ಆಯೋಗವು 25,430 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅದರಲ್ಲಿ 16,416 ಗ್ರಾಮೀಣ ಪ್ರದೇಶದಲ್ಲಿ ಮತ್ತು 9,014 ನಗರ ಪ್ರದೇಶದಲ್ಲಿವೆ.
ಇದನ್ನೂ ಓದಿ: ಮತದಾರರ ಓಲೈಸಲು ಹಣ ಹಂಚುತ್ತಿರುವ ಕಾಂಗ್ರೆಸ್ ಅಭ್ಯರ್ಥಿ: ವಿಡಿಯೋ ವೈರಲ್