ಜಮ್‌ಶೆಡ್‌ಪುರ: ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ದಾವೂದ್ ಇಬ್ರಾಹಿಂನ ಬಂಟ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಈತನ ಮೇಲಿರುವ ಪ್ರಕರಣವೇನು?
1997ರಲ್ಲಿ ಭಾರತ ಗಣರಾಜ್ಯೋತ್ಸವ ದಿನದಂದು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬಾಂಬ್ ಸ್ಫೋಟ ನಡೆಸುವ ಹುನ್ನಾರದಲ್ಲಿ ಈತನೂ ಪಾಲ್ಗೊಂಡಿದ್ದ. ಈ ವೇಳೆ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನೀಡಿದ ಆದೇಶದ ಮೇರೆಗೆ ದಾವೂದ್ ಕಳುಹಿಸಿದ ಸ್ಫೋಟಕಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಜೀದ್ ಪೊಲೀಸರಿಗೆ ಬೇಕಾಗಿದ್ದ.
ವರದಿಗಳ ಪ್ರಕಾರ, ಅಬ್ದುಲ್ ಮಜೀದ್ ಕಳೆದ 24 ವರ್ಷಗಳಿಂದ ಜಾರ್ಖಂಡ್‌ನಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದಾನೆ.
ದೇಶದಲ್ಲಿ ಅಕ್ರಮವಾಗಿ 106 ಪಿಸ್ತೂಲ್, 750 ಕಾರ್ಟ್ರಿಜ್ಗಳು, ನಾಲ್ಕು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಮಾರಾಟ ಮಾಡಿದ ಗಂಭೀರ ಆರೋಪ ಈತನ ಮೇಲಿದೆ.
ಮುಂಬೈ ಬಾಂಬ್ ಸ್ಫೋಟದ ರೂವಾರಿ ದಾವೂದ್:
ದಾವೂದ್ ಇಬ್ರಾಹಿಂ, 1993ರಲ್ಲಿ ನಡೆದ ಭೀಕರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ರೂವಾರಿ. ಈ ದಾಳಿಯಲ್ಲಿ 257 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದರು. ಘಟನೆ ಇಡೀ ದೇಶವನ್ನು ಆತಂಕದ ಕಡಲಲ್ಲಿ ಮುಳುಗಿಸಿತ್ತು.
ಸದ್ಯ ಭೂಗತ ಪಾತಕಿ ಪಾಕಿಸ್ತಾನದಲ್ಲಿ ನೆಲೆಸಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ನಡೆದ ಮಾತುಕತೆಗಳು ಫಲಪ್ರದವಾಗಿಲ್ಲ.
ದೇಶದಲ್ಲಿ ದಾವೂದ್ ಆಸ್ತಿ ಹರಾಜು:
ದಾವೂದ್ ಇಬ್ರಾಹಿಂ ಭಾರತದಲ್ಲಿ ಏಳು ಕಡೆ ಆಸ್ತಿಪಾಸ್ತಿ ಹೊಂದಿದ್ದಾನೆ. ಈ ಆಸ್ತಿಗಳನ್ನು ನವೆಂಬರ್ 10 ರಂದು ಮಹಾರಾಷ್ಟ್ರದಲ್ಲಿ ಹರಾಜು ಮಾಡಲಾಗಿದೆ.