ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಿಎಂ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಈ ತಿಂಗಳ ಅಂತ್ಯದ ವೇಳೆಗೆ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸೂಚನೆಗಳು ಅವರ ಮಾತುಗಳಿಂದ ಕಂಡು ಬಂದಿವೆ.
ಭೂಪೇಂದ್ರ ಪಟೇಲ್ ಅವರು ಸೆಪ್ಟೆಂಬರ್ 13 ರಂದು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗಾಗಿ ಬದ್ಧತೆ ಎಂಬ ಘೋಷವಾಕ್ಯದಡಿ ರಾಜ್ಯ ಸರ್ಕಾರದ ವತಿಯಿಂದ ಮಹಾತ್ಮ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟೆಲಿ ಕಾನ್ಫರೆನ್ಸಿಂಗ್ ಮೂಲಕ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮುಂದಿನ ಬಾರಿಯೂ ಗುಜರಾತಿನಲ್ಲಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಶಾ ಹೇಳಿರುವುದನ್ನು ನೋಡಿದರೆ, ಮತ್ತೆ ಭೂಪೇಂದ್ರ ಪಟೇಲ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಅಲ್ಲದೇ ಗುಜರಾತ್ನಲ್ಲಿ ಬೇಗನೆ ಚುನಾವಣೆ ನಡೆಯಬಹುದು ಎಂಬ ಸಂದೇಶವೂ ಈ ಮಾತುಗಳಿಂದ ಕಂಡು ಬರುತ್ತಿದೆ.
ಅಕ್ಟೋಬರ್ 10 ರಿಂದ 12 ರ ಮಧ್ಯೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಆದರೆ ಒಂದೊಮ್ಮೆ ಅಷ್ಟರೊಳಗೆ ಚುನಾವಣೆ ಘೋಷಣೆಯಾದಲ್ಲಿ ಮತದಾರರ ಪಟ್ಟಿಯನ್ನು ಬೇಗನೆ ತಯಾರಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಗೋಧ್ರಾ ಹಿಂಸಾಚಾರ: ಬಾಕಿ ಉಳಿದ ಎಲ್ಲ ಪ್ರಕರಣಗಳ ವಿಚಾರಣೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್