ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ಕಳೆದ ಒಂದು ವರ್ಷದಿಂದ ಪಕ್ಷ ಬದಲಾವಣೆಯ ಪರ್ವ ಬಂದಂತೆ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಅದರಲ್ಲೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವ ನಾಯಕರ ಸಂಖ್ಯೆ ಹೆಚ್ಚಾಗಿತ್ತು.
ಹಾಗಾಗಿ ಗುಜರಾತ್ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಎಲ್ಲ ನಾಯಕರಿಗೂ ಟಿಕೆಟ್ ನೀಡುತ್ತೇವೆ ಎಂದ ಬಿಜೆಪಿ, ಈ ಬಾರಿ ಕಾಂಗ್ರೆಸ್ ತೊರೆದ ಹತ್ತು ನಾಯಕರಿಗೆ ಟಿಕೆಟ್ಗಳನ್ನೇ ನೀಡಿಲ್ಲ. ಬಿಜೆಪಿ ಸೇರುವ ಮೂಲಕ ಟಿಕೆಟ್ ಪಡೆದು ಅಧಿಕಾರ ಹಿಡಿಯಬಹುದು ಎಂದು ಭಾವಿಸಿದ್ದ ಈ ನಾಯಕರ ಕನಸುಗಳು ಈಗ ಭಗ್ನಗೊಂಡಿವೆ.
ಗುಜರಾತ್ ವಿಧಾನಸಭೆ ಚುನಾವಣೆ 2022 ರ ಫಾರ್ಮ್ ಅನ್ನು ಭರ್ತಿ ಮಾಡಲು ಇಂದು ಕೊನೆಯ ದಿನವಾಗಿತ್ತು. ಹಾಗಾಗಿ ಇಂದು ರಾಜಕೀಯದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಿದೆ. ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಒಟ್ಟು182 ಅಭ್ಯರ್ಥಿಗಳನ್ನು ಘೋಷಿಸಿವೆ. ಇದೀಗ ಚುನಾವಣಾ ಪ್ರಚಾರದ ರಣಕಣ ಕೂಡ ಶುರುವಾಗಲಿದೆ.
ಆದರೆ ಕಾಂಗ್ರೆಸ್ ತೊರೆದ ಅರ್ಧ ಡಜನ್ಗೂ ಹೆಚ್ಚು ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ, ಬೇರೆ ಯಾವುದೇ ಪ್ರಚಾರ ಕಾರ್ಯಕ್ಕೂ ನಿಯೋಜಿಸಿಲ್ಲ ಇದರಿಂದ ಪಕ್ಷ ಬದಲಾವಣೆ ಮಾಡಿದ ನಾಯಕರಿಗೆ ಅಧಿಕಾರ, ಸ್ಥಾನ ಸಿಗದೇ ನಿರಾಶರಾಗಿದ್ದಾರೆ. ಅವರ ಕಂಗಳಲ್ಲಿ ಇದ್ದ ಆಕಾಂಕ್ಷೆಗಳು ಹಾಗೇ ಕಮರಿ ಹೋಗಿವೆ.
ಟಿಕೆಟ್ ಸಿಗದ ಕಾಂಗ್ರೆಸ್ ನಾಯಕರಿವರು: ಜೈರಾಜ್ ಸಿಂಗ್ ಪರ್ಮಾರ್, ಹಿಮಾಂಶು ವ್ಯಾಸ, ದಿನೇಶ್ ಶರ್ಮಾ, ಅನಿಲ್ ಜೋಶಿರಾ ಮಾತ್ರ, ಸೋಮಾಭಾಯಿ ಗಂಡಭಾಯಿ ಪಟೇಲ್, ಧವಲ್ ಸಿಂಗ್ ಝಾಲಾ , ಅಮಿತ್ ಭಾಯ್ ಚೌಧರಿ, ಹಕುಭಾ ಜಡೇಜಾ,ಬ್ರಿಜೇಶ್ ಮೆರ್ಜಾ, ಪರ್ಸೋತ್ತಮ್ ಸಬರಿಯಾ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ.
ಇವರೆಲ್ಲರೂ ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ್ದರು. ಸದ್ಯ ಟಿಕಟ್ ಸಿಗದೇ ಇತ್ತ ಅನ್ನವು ದೊರಕದೇ, ಅತ್ತ ಹಸಿವಿನಿಂದಲೂ ಸಾಯದೆ ಇರುವಂಥ ಪರಿಸ್ಥಿತಿ ಇವರದ್ದಾಗಿದೆ. ಇದು ಬಿಜೆಪಿಗೆ ಒಳಹೊಡೆತ ಕೊಡುತ್ತದಾ ಎಂಬುದಕ್ಕೆ ಫಲಿತಾಂಶ ಬರುವವರೆಗೂ ಕಾಯಲೇಬೇಕಿದೆ.
ಇದನ್ನೂ ಓದಿ; ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಸ್ಥಾನಕ್ಕೆ ಫಾರೂಕ್ ಅಬ್ದುಲ್ಲಾ ರಾಜೀನಾಮೆ