ಅಹಮದಾಬಾದ್( ಗುಜರಾತ್): ಆಮ್ ಆದ್ಮಿ ಪಕ್ಷದ ಐವರು ಶಾಸಕರಲ್ಲಿ ಒಬ್ಬರಾದ ಭೂಪೇಂದ್ರ ಭಯಾನಿ ಬುಧವಾರ ಬೆಳಗ್ಗೆ ರಾಜ್ಯ ವಿಧಾನಸಭೆಯ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಗಾಂಧಿನಗರದಲ್ಲಿ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಇದು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. 2022ರ ಡಿಸೆಂಬರ್ನಲ್ಲಿ ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭಯಾನಿ ಸೌರಾಷ್ಟ್ರ ಪ್ರದೇಶದ ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಸೇವೆ ಮಾಡಲು ಆಪ್ ಸರಿಯಾದ ವೇದಿಕೆಯಲ್ಲ. ನಾನು ಅಭಿವೃದ್ಧಿ ಮತ್ತು ಜನರ ಸೇವೆಯಲ್ಲಿ ನಂಬಿಕೆ ಇರುವ ರಾಷ್ಟ್ರೀಯವಾದಿ ವ್ಯಕ್ತಿ. ನನ್ನ ಪ್ರದೇಶದ ಜನರಿಗೆ ಸೇವೆ ಸಲ್ಲಿಸಲು ಆಪ್ ಸರಿಯಾದ ವೇದಿಕೆಯಾಗಿರಲಿಲ್ಲ. ಯಾವುದೇ ರಾಷ್ಟ್ರೀಯವಾದಿ ದೀರ್ಘಕಾಲ ಆಪ್ನಲ್ಲಿ ಉಳಿಯಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ಆಘಾತ ನೀಡಿದ್ದಾರೆ.
"ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಕಾರ್ಯಕರ್ತನ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ಶೀಘ್ರದಲ್ಲೇ ಆಡಳಿತಾರೂಢ ಬಿಜೆಪಿ ಸೇರ್ಪಡೆಯಾಗುತ್ತೇನೆ. ವಿಶ್ವದಾದ್ಯಂತ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಲು ನಾನು ಇಷ್ಟಪಡುವುದಿಲ್ಲ. ನಾನು ಮೂಲತಃ ಬಿಜೆಪಿ ಪಕ್ಷಕ್ಕೆ ಸೇರಿದವನು. ಶಾಸಕನಾಗುವ ಮೊದಲು ಸುಮಾರು 22 ವರ್ಷಗಳ ಕಾಲ ಬಿಜೆಪಿಗಾಗಿ ಕೆಲಸ ಮಾಡಿದ್ದೇನೆ. ಕೇಂದ್ರ ನಾಯಕತ್ವ ಬಯಸಿದರೆ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನಾನು ಯಾವುದೇ ಒತ್ತಡದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ಭೂಪೇಂದ್ರ ಭಯಾನಿ ನಿರ್ಧಾರದ ಹಿಂದಿನ ಕಾರಣವನ್ನು ಉಲ್ಲೇಖಿಸಿಲ್ಲ. ಭಯಾನಿ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂದು ಗುಜರಾತ್ ವಿಧಾನಸಭೆ ಕಾರ್ಯದರ್ಶಿ ಡಿ.ಎಂ.ಪಟೇಲ್ ಹೇಳಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಆಪ್ ಆದ್ಮಿ ಪಕ್ಷದ ಐದು ಶಾಸಕರಲ್ಲಿ ಭಯಾನಿ ಒಬ್ಬರು. ಬಿಜೆಪಿ 156 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದೊಂದಿಗೆ ವಿಜಯ ಸಾಧಿಸಿತ್ತು. ಆದರೆ ಅದೇ ಮೊದಲ ಬಾರಿಗೆ ಗುಜರಾತ್ನಲ್ಲಿ ಐದು ವಿಧಾನಸಭಾ ಸ್ಥಾನಗಳೊಂದಿಗೆ ಆಮ್ ಆದ್ಮಿ ಪಕ್ಷ ಖಾತೆ ತೆರದಿತ್ತು.
ಇದನ್ನೂ ಓದಿ: ಛತ್ತೀಸ್‌ಗಢ ಸಿಎಂ ಆಗಿ ವಿಷ್ಣು ದೇವ್ ಸಾಯಿ ಪದಗ್ರಹಣ: ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ಬಘೇಲ್ ಭಾಗಿ