ಆಗ್ರಾ (ಉತ್ತರ ಪ್ರದೇಶ): ರಾಗಿ ಮೂಟೆ ಕದ್ದು ಓಡುತ್ತಿದ್ದ ಯುವಕನೊಬ್ಬನನ್ನು ಅಲ್ಲಿನ ಸಾರ್ವಜನಿಕರು ಹಿಡಿದು ಮರಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಿರುವ ಘಟನೆ ಆಗ್ರಾ ಜಿಲ್ಲೆಯ ಪಿನಾಹತ್ ಪೊಲೀಸ್ ಠಾಣಾ ವ್ಯಾಪ್ತಿಯ ಧಾನ್ಯ ಖರೀದಿ ಕೇಂದ್ರದಲ್ಲಿ ಬುಧವಾರ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಕೊನೆಗೆ ಯುವಕನನ್ನು ಮರಕ್ಕೆ ಕಟ್ಟಿದ್ದ ಕಟ್ಟು ಬಿಚ್ಚಿದ್ದು, ಜನರ ಪ್ರತಿಭಟನೆಯ ನಂತರ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಪಿನಾಹತ್ ಪಟ್ಟಣದ ಕಾಕ್ರೌಲಿ ಗ್ರಾಮದ ನಿವಾಸಿ ರೈತ ರಾಜ್‌ಕುಮಾರ್ ಅವರು ಮಾರಾಟ ಮಾಡಲು ಟ್ರ್ಯಾಕ್ಟರ್ - ಟ್ರಾಲಿಯಲ್ಲಿ ರಾಗಿಯನ್ನು ತುಂಬಿಕೊಂಡು ಖರೀದಿ ಕೇಂದ್ರಕ್ಕೆ ಬಂದಿದ್ದರು. ರೈತ ರಾಜಕುಮಾರ್ ರಾಗಿ ತುಂಬಿದ್ದ ಟ್ರಾಲಿಯನ್ನು ನಿಲ್ಲಿಸಿ ಮಾರುಕಟ್ಟೆಯ ನೌಕರರೊಂದಿಗೆ ಮಾತನಾಡಲು ಹೋಗಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಯುವಕನೊಬ್ಬ ಬೈಕನ್ನು ಟ್ರಾಲಿಯ ಹಿಂಬದಿ ನಿಲ್ಲಿಸಿದ್ದಾನೆ.
ಅಲ್ಲಿದ್ದ ಯಾರಿಗೂ ಗೊತ್ತಾಗದಂತೆ ಟ್ರಾಲಿಯಲ್ಲಿದ್ದ ರಾಗಿ ಮೂಟೆಯನ್ನು ಕೆಳಗಿಳಿಸಿ ಬೈಕ್‌ನ ಹಿಂಬದಿಯ ಸೀಟಿನಲ್ಲಿಟ್ಟಿದ್ದಾನೆ. ಬೈಕ್ ಸಮೇತ ಅಲ್ಲಿಂದ ತಪ್ಪಿಸಿಕೊಳ್ಳಲು ಆರಂಭಿಸಿದ ತಕ್ಷಣ ಅಲ್ಲೇ ನಿಂತಿದ್ದ ಕೆಲವರು ಆತನನ್ನು ನೋಡಿ, ಕೇಕೆ ಹಾಕಿದ್ದಾರೆ. ಆಗ ಅಲ್ಲಿದ್ದ ಇನ್ನೂ ಕೆಲವರು ಸೇರಿ ಬೈಕ್ ಸಮೇತ ಯುವಕನ್ನು ಹಿಡಿದಿದ್ದಾರೆ.
ಕಳ್ಳತನ ಮಾಡುತ್ತಿರುವುದು ಗೊತ್ತಾಗಿ ಅಲ್ಲಿದ್ದ ಜನರ ಗುಂಪು ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದೆ. ಥಳಿಸಿದ್ದು, ಮಾತ್ರವಲ್ಲದೇ, ಎಲ್ಲರೂ ಸೇರಿ ಯುವಕನನ್ನು ಅಲ್ಲೇ ಇದ್ದ ಮರಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ. ಈ ವೇಳೆ, ಬೇರೆ ಕಡೆ ಹೋಗಿದ್ದ ರೈತ ರಾಜ್ ಕುಮಾರ್ ಅವರೂ ಸ್ಥಳಕ್ಕಾಗಮಿಸಿದ್ದಾರೆ.
ಯುವಕನನ್ನು ಸುಮಾರು ಒಂದು ಗಂಟೆಗಳ ಕಾಲ ಮರಕ್ಕೆ ಕಟ್ಟಿ ಹಾಕಿದ್ದಾರೆ. ತನ್ನನ್ನು ಬಿಡುವಂತೆ ಯುವಕ ಮತ್ತೆ ಮತ್ತೆ ಅಂಗಾಲಾಚಿ ಬೇಡಿಕೊಳ್ಳುತ್ತಿದ್ದರೂ, ಸಾರ್ವಜನಿಕರು ಮಾತ್ರ ಆತನ ಕಟ್ಟು ಬಿಚ್ಚಿರಲಿಲ್ಲ. ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ ಕಟ್ಟು ಬಿಚ್ಚಿದ್ದಾರೆ. ಸಾರ್ವಜನಿಕರು ಪ್ರತಿಭಟಿಸಿದ ಹಿನ್ನೆಲೆ ಯುವಕನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಯ ದೃಶ್ಯ ಅಲ್ಲಿದ್ದವರ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಪಿನಾಹತ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್ಪೆಕ್ಟರ್ ಕುಲದೀಪ್ ದೀಕ್ಷಿತ್ ಮಾತನಾಡಿದ್ದು, ಧಾನ್ಯ ಖರೀದಿ ಕೇಂದ್ರದಲ್ಲಿ ಕಳ್ಳ ಸಿಕ್ಕಿಬಿದ್ದಿರುವ ಬಗ್ಗೆ 112 ಮೂಲಕ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಯುವಕನನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು. ಕೂಡಲೇ ಪೊಲೀಸರು ಯುವಕನ ಕಟ್ಟು ಬಿಚ್ಚಿ ಬಿಡುಗಡೆಗೊಳಿಸಿದ್ದಾರೆ. ರೈತ ರಾಜ್‌ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮನೆಗಳ್ಳರಿಗೆ ಸಾಥ್ ಕೊಟ್ಟಿದ್ದ ಕಾನ್ಸ್ಟೇಬಲ್ ಅರೆಸ್ಟ್