ಸೀತಾಮರ್ಹಿ(ಬಿಹಾರ) ಪ್ರೀತಿಸುತ್ತಿದ್ದ ಗೆಳತಿಯನ್ನೇ ಅಪಹರಿಸಿ ಜೈಲು ಸೇರಿದ್ದ ಪ್ರಿಯಕರನೊಬ್ಬ, ಶನಿವಾರ ಪೊಲೀಸ್ ಕಸ್ಟಡಿಯಲ್ಲಿದ್ದುಕೊಂಡೇ ಕೋರ್ಟ್ ಆವರಣದಲ್ಲಿ ಅಪಹರಿಸಿದ್ದ ಗೆಳತಿಯೊಂದಿಗೆ ವಿವಾಹವಾಗಿರುವ ವಿಚಿತ್ರ ಘಟನೆ ಬಿಹಾರ ರಾಜ್ಯದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಸೀತಾಮರ್ಹಿ ಜಿಲ್ಲೆಯ ಬೈರ್ಗಾನಿಯಾ ನಿವಾಸಿ ಅರ್ಚನಾ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜಕುಮಾರ್ ಅವರು ಸೀತಾಮರ್ಹಿ ಜೈಲಿನ ಬಂಧನದಲ್ಲಿದ್ದರು. ರಾಜಕುಮಾರ್ ಮತ್ತು ಅರ್ಚನಾ ಒಬ್ಬರನ್ನೊಬ್ಬರು ಬಹಳಷ್ಟು ದಿನಗಳಿಂದ ಪ್ರೀತಿಸುತ್ತಿದ್ದರು. ಒಂದು ದಿನ ರಾಜಕುಮಾರ್ ತನ್ನ ಗೆಳತಿ ಅರ್ಚನಾ ಇಬ್ಬರು ಸೇರಿ ಓಡಿಹೋಗಿದ್ದರು. ಆಗ ತಂದೆ ಸಿಟ್ಟಿಗೆದ್ದು, ಮಗಳು ಅರ್ಚನಾಳನ್ನು ಅಪಹರಣ ಮಾಡಲಾಗಿದೆ ಎಂದು ಸೀತಾಮರ್ಹಿ ಜಿಲ್ಲೆಯು ಬರ್ಗಾನಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕುಮಾರ್ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
6 ತಿಂಗಳಿನಿಂದ ಪ್ರಿಯಕರ ರಾಜಾ ಜೈಲಿನಲ್ಲಿ ಇದ್ದಾನೆ. ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಶನಿವಾರ ಜೈಲಿನಿಂದ ಸೀತಾಮರ್ಹಿ ಕೋರ್ಟ್ಗೆ ಬಂದ ಪ್ರಿಯಕರ ರಾಜಕುಮಾರ್, ಆವರಣದ ಶಿವ ದೇವಾಲಯದಲ್ಲಿ ಅರ್ಚನಾ ಜತೆ ಸಪ್ತಪದಿ ತುಳಿದರು. ರಾಜಕುಮಾರ್ ನರ್ಕಟಿಯಾಗಂಜ್ ನಿವಾಸಿಯಾಗಿದ್ದರೆ, ಅರ್ಚನಾ ಸೀತಾಮರ್ಹಿಯ ಬರ್ಗಾನಿಯಾ ನಿವಾಸಿಯಾಗಿದ್ದರು. ಸೀತಾಮರ್ಹಿಯ ಜಿಲ್ಲೆಯ ಡುಮ್ರಾ ಕೋರ್ಟ್ ಆವರಣದ ಶಿವ ದೇವಾಲಯದಲ್ಲಿ ನ್ಯಾಯಾಧೀಶರ, ವಕೀಲರ ಸಮ್ಮುಖದಲ್ಲಿ ಪ್ರೇಮಿಗಳು ನವದಾಂಪತ್ಯಕ್ಕೆ ಪದಾರ್ಪಣೆ ಮಾಡಿದರು.
ರಾಜಕುಮಾರ್ ಅರ್ಚನಾ ಮದುವೆಗೆ ಕೋರ್ಟ್ ಅಸ್ತು :ಇಬ್ಬರು ಪ್ರೇಮಿಗಳು ಮದುವೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇಬ್ಬರ ವಿವಾಹಕ್ಕೆ ಸಮ್ಮತಿ ನೀಡಿ ಆದೇಶಿಸಿತು. ನ್ಯಾಯಾಲಯದ ಆದೇಶದಂತೆ ಕೋರ್ಟ್ ಆವರಣದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ ಎನ್ನುತ್ತಾರೆ ಹುಡುಗಿಯ ಸಂಬಂಧಿಕರು. ನ್ಯಾಯಾಲಯದ ಆದೇಶದಂತೆ ಇಬ್ಬರೂ ಡುಮ್ರಾ ನ್ಯಾಯಾಲಯದ ಆವರಣದ ಶಿವನ ದೇವಸ್ಥಾನದಲ್ಲಿ ಮದುವೆ ನಡೆಯಿತು ಎಂದು ಹುಡುಗಿಯ ಸಹೋದರ ತಿಳಿಸಿದ್ದಾರೆ.
ಪ್ರೇಮಿಗಳ ಮದುವೆಗೆ ಸಾಕ್ಷಿಯಾದ ಎರಡು ಕುಟುಂಬಗಳು: ಪೊಲೀಸ್ ಕಸ್ಟಡಿಯಿಂದ ಕೈಬೇಡಿ ಹಾಕಿಕೊಂಡು ಹೊರಬಂದ ಆರೋಪಿ ರಾಜಕುಮಾರ್ ಹಾಗೂ ಅರ್ಚನಾ ಇಬ್ಬರು ಏಳು... ಏಳು... ಜನ್ಮಗಳವರೆಗೆ ಕೂಡಿ ಬಾಳುವುದಾಗಿ ಸಪ್ತಪದಿ ತುಳಿದರು. ಮದುವೆ ಮುಗಿದ ಬಳಿಕ ರಾಜಕುಮಾರ್ ಮತ್ತೆ ಸೀತಾಮರ್ಹಿ ಜೈಲು ಸೇರಿಕೊಂಡನು.
ಆದರೆ, ಈ ವಿಚಿತ್ರ ಮದುವೆಗೆ ಇಬ್ಬರ ಮನೆಯವರು ಸಾಕ್ಷಿಯಾಗಿದ್ದು ಆಶ್ಚರ್ಯ ಎನಿಸಿತು. ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಈ ಮದುವೆ ನಡೆಯಿತು. ಸದ್ಯ ನವ ವರ ಆರೋಪಿ ರಾಜಕುಮಾರ್ 7 ತಿಂಗಳ ಕಾಲ ಸೀತಾಮರ್ಹಿ ಜೈಲಿನಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳುವರೇ ಕಾದು ನೋಡಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಜೂನ್ 19 ರಂದು ನಡೆಯಲಿದೆ.
ಇಬ್ಬರಿಗೆ ಪ್ರೇಮಾಂಕುರ ಆಗಿದ್ದು ಹೇಗೆ ?: ಆಶೋಗಿ ಗ್ರಾಮದ ಬೈರ್ಗಾನಿಯಾ ನಿವಾಸಿ ಅಮರನಾಥ ಮಹತೋ ಅವರ ಪುತ್ರಿ ಅರ್ಚನಾ ಕುಮಾರಿ (23) ಹಾಗೂ ನರ್ಕಟಿಯಾಗಂಜ್ ನಿವಾಸಿ ಗೋಪಾಲ್ ಪ್ರಸಾದ್ ಅವರ ಪುತ್ರ ರಾಜಕುಮಾರ್ (28) 2016 ರಿಂದ ಇಬ್ಬರು ಪ್ರೀತಿಸುತ್ತಿದ್ದರು. ರಾಜಕುಮಾರ್ ಅವರ ಅತ್ತಿಗೆಯ ಮನೆ ಸೀತಾಮರ್ಹಿಯಲ್ಲಿದ್ದು ಅಲ್ಲಿಯೇ ಇದ್ದು ಓದುತ್ತಿದ್ದರು.ಆ ಸಂದರ್ಭದಲ್ಲಿ ಇಬ್ಬರಲ್ಲಿ ಪ್ರೇಮ ಶುರುವಾಗಿ ಅನೈತಿಕ ಸಂಬಂಧದ ವರೆಗೆ ತಲುಪಿತು.
ಇಬ್ಬರೂ 4 ನವೆಂಬರ್ 2022 ರಂದು ಮನೆಯಿಂದ ಓಡಿಹೋಗಿದ್ದರು. ಅದೇ ದಿನ ಯುವತಿಯ ಕುಟುಂಬಸ್ಥರು ಪ್ರಿಯಕರನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಬರ್ಗಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಇಬ್ಬರು ಪ್ರೇಮಿಗಳು ಬಂಧಿಸಲ್ಪಟ್ಟರು. ಇಬ್ಬರನ್ನೂ ವಶಕ್ಕೆಪಡೆದ ಪೊಲೀಸರು ರಾಜಕುಮಾರ್ನನ್ನು ನವೆಂಬರ್ 6 ರಂದು ಜೈಲಿಗೆ ಕಳುಹಿಸಿದ್ದರು.
ಇದನ್ನೂಓದಿ:ಲೇಡಿ ಸಿಂಗಂ ಜುನ್ಮೋನಿ ರಾಭಾ ಸಾವು ಪ್ರಕರಣ: ಸಿಐಡಿಯಿಂದ ಸಿಬಿಐಗೆ ತನಿಖೆ ವರ್ಗಾವಣೆ