ರಂಗಾರೆಡ್ಡಿ: ಬೆಳಗ್ಗೆ ಮದುವೆ ಇಟ್ಕೊಂಡು ರಾತ್ರೋರಾತ್ರಿ ವರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಕೊಂಡಪಲ್ಲಿ ತಾಲೂಕಿನಲ್ಲಿ ನಡೆದಿದೆ.
ಮೆದಕ್ಪಲ್ಲಿ ನಿವಾಸಿ ಯಾದಮ್ಮ ಮತ್ತು ಲಿಂಗಯ್ಯನ ಮಗ ಶ್ರೀಕಾಂತ್ ಗೌಡ (25) ಕಂದಕೂರು ತಾಲೂಕಿನ ಗ್ರಾಮವೊಂದರ ಯುವತಿಯೊಂದಿಗೆ ಜೂನ್ 4 ಅಂದ್ರೆ ಇಂದು ಮದುವೆ ನಿಶ್ಚಯವಾಗಿತ್ತು. ಹೊಸದಾಗಿ ನಿರ್ಮಿಸಿದ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಗುರುವಾರ ಬೆಳಗ್ಗೆ ಹೊಸ ಮನೆಯ ಮುಂದೆ ಕುಟುಂಬಸ್ಥರು ಚಪ್ಪರ ಹಾಕುತ್ತಿದ್ದರು. ಹಳೆಯ ಮನೆಯಲ್ಲಿ ವರ ಶ್ರೀಕಾಂತ್ ವಿಶ್ರಾಂತಿ ಪಡೆಯುತ್ತಿದ್ದು, ಶ್ರೀಕಾಂತ್ ಬಳಿ ಸಹೋದರ ರಾಜು ತೆರಳಿದ್ದಾನೆ. ಸ್ವಲ್ಪ ಸಮಯದ ನಂತರ ರಾಜು ಕೆಲಸದ ನಿಮಿತ್ತ ಬೈಕ್ ಮೇಲೆ ತೆರಳಿದ್ದಾನೆ. ರಾಜು ಮತ್ತೆ ವಾಪಸಾಗುವಷ್ಟರಲ್ಲಿ ಶ್ರೀಕಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನು ನೋಡಿದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ವರ ಶ್ರೀಕಾಂತ್ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಮೃತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.