ನವದೆಹಲಿ : ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಲು ಏಪ್ರಿಲ್ನಿಂದ ಬಿಸಿಯೂಟ ಯೋಜನೆ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ ( ಐಸಿಡಿಎಸ್ ) ಮೂಲಕ ಪೌಷ್ಠಿಕಾಂಶ ಸೇರಿಸಲ್ಪಟ್ಟ ( ಫಾರ್ಟಿಫೈಡ್) ಅಕ್ಕಿ ವಿತರಿಸಲಾಗುತ್ತದೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ, ಪೌಷ್ಠಿಕಾಂಶ ಸೇರಿಸಲ್ಪಟ್ಟ ಅಕ್ಕಿಯನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ. ಇದನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಎಂದೂ ಕರೆಯಲಾಗುತ್ತದೆ. 2019 ರಲ್ಲಿ ಮೂರು ತಿಂಗಳವರೆಗೆ ಪ್ರಾಯೋಗಿಕ ಆಧಾರದ ಮೇಲೆ ಕೇಂದ್ರ ಯೋಜನೆಯನ್ನು ಅನುಷ್ಠಾನಗೊಳಿಸಲು ಗುರುತಿಸಲಾದ 15 ರಾಜ್ಯಗಳ ಪೈಕಿ ಆರು ರಾಜ್ಯಗಳ ತಲಾ ಒಂದು ಜಿಲ್ಲೆಯಲ್ಲಿ 2019 -20 ರ ನಡುವೆ ಈ ಅಕ್ಕಿ ವಿತರಿಸಲಾಗಿದೆ. ದೇಶದಲ್ಲಿ ರಕ್ತಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸುವುದು ಯೋಜನೆಯ ಉದ್ದೇಶವಾದೆ.
ದೇಶದ ಜನಸಂಖ್ಯೆಯ ಶೇ. 65 ರಷ್ಟು ಜನರು ಅಕ್ಕಿಯನ್ನು ಪ್ರಧಾನ ಆಹಾರವಾಗಿ ಬಳಸುತ್ತಾರೆ. ಆಹಾರದಲ್ಲಿ ವಿಟಮಿನ್ ಮತ್ತು ಖನಿಜಾಂಶವನ್ನು ಹೆಚ್ಚಿಸಲು ಮತ್ತು ರಕ್ತಹೀನತೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಪೌಷ್ಠಿಕಾಂಶ ಸೇರಿಸಲ್ಪಟ್ಟ ಅಕ್ಕಿಯನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ.