ನವದೆಹಲಿ: ಕೇಂದ್ರ ಸರ್ಕಾರವು 2021-22ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲೆ ಶೇಕಡಾ 8.1 ಬಡ್ಡಿ ದರವನ್ನು ಅನುಮತಿಸಿದೆ. ಇದು ನಾಲ್ಕು ದಶಕಗಳಲ್ಲಿ ಕಡಿಮೆ ಬಡ್ಡಿ ದರವಾಗಿದೆ. ಈ ನಿರ್ಧಾರವು ಸುಮಾರು ಐದು ಕೋಟಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.
ಈ ವರ್ಷದ ಮಾರ್ಚ್‌ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು 2020-21ರಲ್ಲಿ ಒದಗಿಸಿದ 8.5 ಪ್ರತಿಶತದಿಂದ 8.1 ಪ್ರತಿಶತಕ್ಕೆ ಇಳಿಸಲು ನಿರ್ಧರಿಸಿತ್ತು.
ಇಂದು ಹೊರಡಿಸಿದ ಇಪಿಎಫ್‌ಒ ಕಚೇರಿ ಆದೇಶದ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿ ಸದಸ್ಯರಿಗೆ 2021-22 ಕ್ಕೆ 8.1 ಶೇಕಡಾ ಬಡ್ಡಿದರವನ್ನು ನೀಡಲು ಕೇಂದ್ರ ಸರ್ಕಾರ ಅನುಮೋದನೆಯನ್ನು ರವಾನಿಸಿದೆ.
ಕಾರ್ಮಿಕ ಸಚಿವಾಲಯವು ತನ್ನ ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರವಾನಿಸಿತ್ತು. ಈಗ ಸರ್ಕಾರವು ಬಡ್ಡಿದರವನ್ನು ಅನುಮೋದಿಸಿದ ನಂತರ ಇಪಿಎಫ್‌ಒ ಆರ್ಥಿಕ ವರ್ಷಕ್ಕೆ ನಿಗದಿತ ಬಡ್ಡಿದರವನ್ನು ಇಪಿಎಫ್ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸಲಾಗುತ್ತದೆ.
ಯಾವಾಗ ಎಷ್ಟು ಬಡ್ಡಿ ನಿಗದಿಯಾಗಿತ್ತು: 2020-21 ರ ಇಪಿಎಫ್ ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (CBT) ಮಾರ್ಚ್ 2021 ರಲ್ಲಿ ನಿರ್ಧರಿಸಿತ್ತು. ಇದನ್ನು ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿತ್ತು. ನಂತರ ಇಪಿಎಫ್ಓ ಕ್ಷೇತ್ರ ಕಚೇರಿಗಳಿಗೆ ಕ್ರೆಡಿಟ್ ಮಾಡಲು ನಿರ್ದೇಶನಗಳನ್ನು ನೀಡಿತ್ತು. 2018-19 ರಲ್ಲಿ ನೀಡಲಾಗುತ್ತಿದ್ದ ಶೇಕಡಾ 8.65 ಬಡ್ಡಿದರವನ್ನು 2019-20ರಲ್ಲಿ 8.5 ಕ್ಕೆ ಇಳಿಸಿದೆ. ಇನ್ನೂ ಹಿಂದೆ ಹೋದರೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು 8.8 ಇತ್ತು ಹಾಗೆ 2013-14 ಮತ್ತು 2014-15 ರಲ್ಲಿ 8.75 ಪರ್ಸೆಂಟ್ ಬಡ್ಡಿದರವನ್ನು ನೀಡಲಾಗಿದೆ. 2012-13 ರಲ್ಲಿ 8.5 ಬಡ್ಡಿ ಮತ್ತು 2011-12ರಲ್ಲಿ ಶೇ.8.25 ಬಡ್ಡಿಯನ್ನು ಉದ್ಯೋಗಿಗಳಿಗೆ ನೀಡಲಾಗಿದೆ.
ಇದನ್ನೂ ಓಧಿ: ಪತ್ನಿ ಸೀಮಂತಕ್ಕೆ ಬಂದ ಯೋಧ ಅಪಘಾತದಲ್ಲಿ ಸಾವು.. ಹುಟ್ಟೂರು ಬೈಲಹೊಂಗಲದಲ್ಲಿ ಭಾವಪೂರ್ಣ ವಿದಾಯ