ನವದೆಹಲಿ: ಭಾರತದ ಕರಾವಳಿಯಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ಅನೇಕ ಸಂಸ್ಥೆಗಳು ನಿಭಾಯಿಸುತ್ತಿದ್ದು, ಅವುಗಳ ನಡುವೆ ಮಾಹಿತಿ ಹಂಚಿಕೆಗೆ ಸಹಕಾರಿಯಾಗುವಂತೆ ಮತ್ತು ಆದಷ್ಟು ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲು ಹೊಸದಾಗಿ ಹುದ್ದೆಯನ್ನು ಸೃಷ್ಟಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಮುಖ ಜಾಗತಿಕ ಶಕ್ತಿಯಾಗಿ ಮಾರ್ಪಾಡಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡಾ ಸಾಗರೋತ್ತರವಾಗಿ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕಡಲ ಭದ್ರತಾ ಸಂಯೋಜಕರನ್ನು (National Maritime Security Coordinator) ನೇಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಡಲ ಭದ್ರತಾ ಸಂಯೋಜಕರ ಸ್ಥಾನಕ್ಕೆ ಭಾರತೀಯ ನೌಕಾಪಡೆಯ ನಿವೃತ್ತ ಅಥವಾ ಸೇವೆ ಸಲ್ಲಿಸುತ್ತಿರುವ ವೈಸ್ ಅಡ್ಮಿರಲ್ ಅವರನ್ನು ಆಯ್ಕೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಂಯೋಜಕರು ರಾಷ್ಟ್ರೀಯ ಕಡಲ ಆಯೋಗದ (ಎನ್‌ಎಂಸಿ) ಮುಖ್ಯಸ್ಥರಾಗಿರುತ್ತಾರೆ.
ರಾಷ್ಟ್ರೀಯ ಕಡಲ ಆಯೋಗವು ಭಾರತೀಯ ನೌಕಾಪಡೆ, ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ), ಬಂದರುಗಳು ಮತ್ತು ಹಡಗು ಸಚಿವಾಲಯಗಳಂತಹ ಎಲ್ಲಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ವರದಿ ಮಾಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಿಕೆ-ರಾಹುಲ್ ಭೇಟಿ: ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ
1999ರ ಕಾರ್ಗಿಲ್ ಯುದ್ಧದ ನಂತರ ರಚನೆಯಾದ ಕಾರ್ಗಿಲ್ ಪರಿಶೀಲನಾ ಸಮಿತಿಯು, ಭಾರತೀಯ ನೌಕಾಪಡೆ, ಐಸಿಜಿ ಮತ್ತು ಇತರ ಸಚಿವಾಲಯಗಳು ಹಾಗೂ ರಾಜ್ಯ ಸರ್ಕಾರಗಳ ಇಲಾಖೆಗಳ ನಡುವೆ ಸಮನ್ವಯತೆಗಾಗಿ ಹೊಸ ಸಂಸ್ಥೆಯನ್ನು ರಚಿಸಲು ಶಿಫಾರಸು ಮಾಡಿತ್ತು. ಈಗ ಹೊಸ ಸಂಸ್ಥೆಗೆ ಕಾಯಕಲ್ಪ ಸಿಗುವ ಸಾಧ್ಯತೆಯಿದೆ.