ಶ್ರೀನಗರ(ಜಮ್ಮು ಕಾಶ್ಮೀರ): ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಯುವ ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ್ದು, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಸ್ವೀಕರಿಸಲಾದ ಕೋವಿಡ್ ಮಾರ್ಗಸೂಚಿಗಳನ್ನು ಒಳಗೊಂಡಂತಿರುವ ವರದಿಯ ಆಧಾರದ ಮೇಲೆ ಪಿಡಿಪಿ ವತಿಯಿಂದ ಗುಪ್ಕಾರ್‌ನಲ್ಲಿ ನಡೆಯಲಿರುವ ಯುವ ಸಮಾವೇಶಕ್ಕೆ ಅನುಮತಿ ನೀಡದಂತೆ ಆದೇಶ ನೀಡಲಾಗಿದೆ ಎಂದು ದಕ್ಷಿಣ ಶ್ರೀನಗರದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಸ್ಟೇಷನ್ ಹೌಸ್ ಅಧಿಕಾರಿಯಾದ ರಾಮ್ ಮುನ್ಷಿ ಬಾಗ್ ಅವರಿಗೆ ಸರ್ಕಾರದ ಅನುಮತಿಯಿಲ್ಲದೆ ಗುಪ್ಕಾರ್‌ನಲ್ಲಿ ಅಂತಹ ಯಾವುದೇ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಲು ಈ ಮೂಲಕ ನಿರ್ದೇಶನ ನೀಡಲಾಗಿದೆ ಎಂದು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಯುವ ಸಮಾವೇಶ ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಮೆಹಬೂಬಾ ಮುಫ್ತಿ ಸಮಾವೇಶಕ್ಕೆ ಹೊರಡಬಹುದಾದ ಎಲ್ಲಾ ರಸ್ತೆಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಅಗ್ನಿ ನರ್ತನ: 27 ಮನೆಗಳು, ಎರಡು ದೇವಾಲಯ, 26 ದನಗಳು ಬೆಂಕಿಗಾಹುತಿ