ನವದೆಹಲಿ: ಸುಪ್ರೀಂಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಶನಿವಾರ ಅಂಗೀಕರಿಸಿದೆ. ಅವರಲ್ಲಿ ನ್ಯಾಯಮೂರ್ತಿ ಪಂಕಜ್ ಮಿಥಾಲ್ -ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ , ನ್ಯಾಯಮೂರ್ತಿ ಸಂಜಯ್ ಕರೋಲ್ ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ , ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ - ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ - ನ್ಯಾಯಮೂರ್ತಿ, ಪಾಟ್ನಾ ಹೈಕೋರ್ಟ್ ಮತ್ತು ನ್ಯಾ. ಮನೋಜ್ ಮಿಶ್ರಾ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಗಳನ್ನಾಗಿ ನೇಮಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು.
ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಡಿಸೆಂಬರ್ 13 ರಂದು ಈ ಐದು ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ನ್ಯಾಯಾಂಗ ಮತ್ತು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ಮೋದಿ ಸರ್ಕಾರ ಈ ಪ್ರಸ್ತಾವಕ್ಕೆ ಒಪ್ಪಿಗೆ ಕೊಟ್ಟಿದೆ.
ನ್ಯಾಯಮೂರ್ತಿಗಳನ್ನು ಚೀಫ್ ಜಸ್ಟಿಸ್ ನೇತೃತ್ವದ ಕೊಲಿಜಿಯಂ ಅಷ್ಟೇ ಆಯ್ಕೆ ಮಾಡುವುದು ಸರಿಯಲ್ಲ ಅದರಲ್ಲಿ ಕೇಂದ್ರ ಸರ್ಕಾರದ ಶಿಫಾರಸುಗಳನ್ನು ಪರಿಗಣಿಸಬೇಕು ಎಂದು ಸರ್ಕಾರ ತನ್ನ ಅಭಿಪ್ರಾಯ ಹೇಳಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ಮತ್ತು ಸರ್ಕಾರದ ನಡುವೆ ಮಾತಿನ ಸಮರ ನಡೆದಿತ್ತು. ಕೇಂದ್ರದ ನಿಲುವಿಗೆ ನ್ಯಾಯಮೂರ್ತಿಗಳು ಅಸಮಾಧಾನ ಹೊರ ಹಾಕಿದ್ದರು. ಕೊಲಿಜಿಯಂ ಶಿಫಾರಿಸಿಗೆ ಅನುಮೋದನೆ ನೀಡದೆ ವಿಳಂಬ ಮಾಡಿದರೆ, ನ್ಯಾಯದಾನಕ್ಕೆ ತೊಂದರೆ ಆಗುತ್ತದೆ ಎಂದು ಸುಪ್ರೀಂ ತನ್ನ ಅಸಮಾಧಾನ ಹೊರಹಾಕಿತ್ತು. ಇದಾದ ಬಳಿಕ ಈಗ ಕೇಂದ್ರ ಸರ್ಕಾರ ಕೊಲಿಜಿಯಂ ಶಿಫಾರಸನ್ನು ಅಂಗೀಕರಿಸಿದೆ.
"ವರ್ಗಾವಣೆಯಲ್ಲಿ ಯಾವುದೇ ವಿಳಂಬವು ಆಡಳಿತ ಮತ್ತು ನ್ಯಾಯಾಂಗ ಕ್ರಮಗಳಿಗೆ ಕಾರಣವಾಗಬಹುದು ಎಂದು ನಾವು ಅಟಾರ್ನಿ ಜನರಲ್ ಅವರಿಗೆ ತಿಳಿಸಿದ್ದೇವೆ. ಕೊಲಿಜಿಯಂ ನಿರ್ಧಾರವನ್ನು ಒಪ್ಪದೇ ವಿಳಂಬ ಮಾಡುವುದು ಸರಿಯಲ್ಲ ಹಾಗೂ ಸ್ವಾಭಾವಿಕ ನಿಯಮದ ವಿರುದ್ಧವಾಗಲಿದೆ ಎಂದು ನ್ಯಾಯಾಲಯ ಶುಕ್ರವಾರ ಖಾರವಾಗಿಯೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದ ವಿಷಯದ ವಿಚಾರಣೆ ನಡೆಸುತ್ತಾ ಕೇಂದ್ರ ಸರ್ಕಾರದ ವಿಳಂಬ ದೋರಣೆ ಬಗ್ಗೆ ಅಸಮಾಧಾನ ಹೊರ ಹಾಕಿತ್ತು.
ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಮಾಡಿದ್ದ ಶಿಫಾರಸುಗಳಿಗೆ ಅಂಗೀಕಾರ ನೀಡದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಕೊಲಿಜಿಯಂ ವಿರುದ್ಧದ ಟೀಕೆಗಳು, ನೇಮಕಾತಿಗೆ ಸೂಚಿಸಿರುವ ಹೆಸರುಗಳಿಗೆ ಅಂತಿಮ ಮುದ್ರೆ ಒತ್ತದೆ ವಿಳಂಬ ಮಾಡುತ್ತಿರುವುದನ್ನು ಸುಪ್ರೀಂಕೋರ್ಟ್ ಖಂಡಿಸಿತ್ತು.
ಇದನ್ನು ಓದಿ: ಬಿಜೆಡಿ ಶಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಕೇಸು ದಾಖಲಿಸಲು ಹೈಕೋರ್ಟ್ ಆದೇಶ
ಇದನ್ನು ಓದಿ:ಸತತ ಮೂರನೇ ಬಾರಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ