ನವದೆಹಲಿ: ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶೀಯ ವಿಮಾನಗಳ ಸಂಚಾರದಲ್ಲಿ ಶೇ.72.5 ರಷ್ಟು ಮಿತಿಯನ್ನು ವಿಧಿಸಲಾಗಿತ್ತು. ಆದರೆ ಇದೀಗ ಶೇ.85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ತಿಳಿಸಿದೆ.
ಆಗಸ್ಟ್ 12ರವರೆಗೆ ವಿಮಾನಯಾನ ಸಂಸ್ಥೆಗಳು ಶೇ.72.5ರಷ್ಟು ಪ್ರಮಾಣದಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದ್ದವು. ಅಷ್ಟೇ ಅಲ್ಲದೆ ಅದಕ್ಕೂ ಮುಂಚಿತವಾಗಿ ಅಂದರೆ ಜುಲೈ 5ರಿಂದ ಆಗಸ್ಟ್ 12ರವರೆಗೆ ಈ ಪ್ರಮಾಣವು ಶೇ 64ರವರೆಗೆ ಇತ್ತು. ಇದೀಗ ಕ್ರಮೇಣ ಹೆಚ್ಚಳ ಮಾಡುತ್ತಿದ್ದು, ಶೇ.85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು ಎಂದು ಆದೇಶ ಹೊರಡಿಸಿದೆ.
ವಿಮಾನಯಾನದ ಬೇಡಿಕೆಗೆ ಹೋಲಿಸಿದರೆ ದೇಶಿಯ ವಿಮಾನ ಕಾರ್ಯಾಚರಣೆಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಡೈರೆಕ್ಟೋರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಇತ್ತೀಚಿನ ಮಾಹಿತಿಯ ಪ್ರಕಾರ, ಜುಲೈನಲ್ಲಿ 5.01 ಮಿಲಿಯನ್‌ಗೆ ಹೋಲಿಸಿದರೆ ಆಗಸ್ಟ್‌ನಲ್ಲಿ 6.7 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ವಿಮಾನಯಾನ ಕೈಗೊಂಡಿದ್ದಾರೆ.