ಕೋಯಿಕ್ಕೋಡ್ (ಕೇರಳ): ಇಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಕೋಯಿಕ್ಕೋಡ್ ನಗರದ ಎಸ್ಎಂ ಸ್ಟ್ರೀಟ್ ಮತ್ತು ಮನಂಚಿರಾದ ಜನನಿಬಿಡ ರಸ್ತೆಗಳಲ್ಲಿ ಓಡಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಎಸ್‌ಎಫ್‌ಐ, ಡಿವೈಎಫ್ಐ ಬೆದರಿಕೆ ಹಾಗೂ ಪ್ರತಿಭಟನೆಯ ನಡುವೆಯೂ ರಾಜ್ಯಪಾಲರು ಜನನಿಬಿಡ ರಸ್ತೆಗಳಲ್ಲಿ ನಡೆದುಕೊಂಡು ಹೋಗಿ ಸಾರ್ವಜನಿಕರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ಇದಕ್ಕೂ ಮೊದಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು, ಪೊಲೀಸ್ ಭದ್ರತೆ ನಿರಾಕರಿಸಿದ್ದರು.
ರಾಜ್ಯಪಾಲರು ಐತಿಹಾಸಿಕ ಪ್ರಸಿದ್ಧ ಮಿಠಾಯಿ ಅಂಗಡಿಗಳಿರುವ ಬೀದಿಗೆ ತೆರಳಿ ಅಂಗಡಿಯೊಂದರಿಂದ ಹಲ್ವಾ ಖರೀದಿಸಿದರು. ಅವರು ಪೊಲೀಸ್ ಭದ್ರತೆ ನಿರಾಕರಿಸಿದರೂ, ಮಫ್ತಿ ಮತ್ತು ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿ ರಾಜ್ಯಪಾಲರಿಗೆ ಭದ್ರತೆ ನೀಡಿದರು. ಇದರ ನಡುವೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯಪಾಲರನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಇದು ಕೇಂದ್ರ - ರಾಜ್ಯ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದನ್ನೂ ಓದಿ: ಕುಲಪತಿ ಸ್ಥಾನದಿಂದ ರಾಜ್ಯಪಾಲರನ್ನು ವಜಾಗೊಳಿಸಿದ ಕೇರಳ ಸರ್ಕಾರ
ಕೇರಳ ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರ ಪ್ರತಿಭಟನೆ: ಮತ್ತೊಂದೆಡೆ, ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದು, ಕ್ಯಾಂಪಸ್ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಬ್ಯಾನರ್‌ಗಳನ್ನು ಹಾಕಿದ್ದು, ಅವುಗಳನ್ನು ಪೊಲೀಸರು ತೆರವುಗೊಳಿಸಿದ್ದರು. ಆದರೆ, ಮತ್ತೆ ಎಸ್‌ಎಫ್‌ಐ ಕಾರ್ಯಕರ್ತರು ಗವರ್ನರ್ ಮೊಹಮ್ಮದ್ ಆರಿಫ್ ಖಾನ್ ವಿರುದ್ಧದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.
ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಅತಿಥಿ ಗೃಹದ ಹೊರಗೆ ಹಾಕಿರುವ ಬ್ಯಾನರ್ಗಳಲ್ಲಿ "ಸಂಘಿ" ಮತ್ತು ''ವಾಪಸ್ ಜಾವೋ" ಎಂದು ಬರೆಯಲಾಗಿದೆ. ಈ ಕುರಿತು ಕಿಡಿಕಾರಿರುವ ರಾಜ್ಯಪಾಲರು ಈ ಬ್ಯಾನರ್‌ಗಳನ್ನು ರಾಜ್ಯ ಪೊಲೀಸರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ಮೇರೆಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ವಿಶ್ವವಿದ್ಯಾಲಯದ ಕೆಲವು ಟಿವಿ ದೃಶ್ಯಗಳಲ್ಲಿ ರಾಜ್ಯಪಾಲ ಆರಿಫ್ ರಾಜಭವನದಲ್ಲಿ ತಮ್ಮ ಕಾರ್ಯದರ್ಶಿಯೊಂದಿಗೆ ಫೋನ್ ಕರೆಯಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ.
ತಮ್ಮ ವಿರುದ್ಧದ ಬ್ಯಾನರ್ಗಳ ಕುರಿತು ಪೊಲೀಸರಿಗೆ ಮಾಹಿತಿ ಇದೆಯಾ ಎಂದು ತಿಳಿದುಕೊಳ್ಳಲು ಉಪಕುಲಪತಿಗೆ ಒಂದು ನೋಟಿಸ್ ಕಳುಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ವಿಶ್ವವಿದ್ಯಾನಿಲಯದ ವಿವಿಧ ಭಾಗಗಳಲ್ಲಿ ಎಸ್‌ಎಫ್‌ಐ ಕುಲಪತಿ ವಿರುದ್ಧವೇ ಬ್ಯಾನರ್‌ಗಳನ್ನು ಹಾಕಲು ಹೇಗೆ ಅನುಮತಿ ಮಾಡಿಕೊಟ್ಟಿತು ಎಂಬುದರ ವಿವರಣೆಯನ್ನು ವಿವಿಯ ಉಪಕುಲಪತಿ ನೀಡಬೇಕು ಎಂದು ತಿಳಿಸಿದ್ದಾರೆ.