ನವದೆಹಲಿ : ಚುನಾವಣೆ ನಡೆಯುವ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವಿಪಕ್ಷಗಳ ನಾಯಕರ ಮೇಲೆ ಒತ್ತಡ ಹೇರಲು ಮತ್ತು ಬೆದರಿಕೆ ಹಾಕಲು ಕೇಂದ್ರ ಸರ್ಕಾರ ತನಿಖಾ ಏಜೆನ್ಸಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇನಾಲಯ ಬಂಧಿಸಿತ್ತು. ಇದು ಪಂಜಾಬ್ ಸಿಎಂ ಅವರನ್ನು ಒತ್ತಡಕ್ಕೆ ಸಿಲುಕಿಸುವ ಪ್ರಯತ್ನವಾಗಿದೆ. ಚುನಾವಣೆ ಸಂದರ್ಭದಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.
ಗುರುವಾರ ತಡರಾತ್ರಿ ಜಲಂಧರ್‌ನಲ್ಲಿ ಭೂಪಿಂದರ್ ಅವರನ್ನು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು, ಮೊಹಾಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನಾಳೆ 'ಸಮಾನತೆಯ ಪ್ರತಿಮೆ'ಯನ್ನು ಉದ್ಘಾಟಿಸಲಿರುವ ಪಿಎಂ ಮೋದಿ.. ಹೈದರಾಬಾದ್‌ನಲ್ಲಿ ಬಿಗಿ ಭದ್ರತೆ
20 ದಿನಗಳ ಹಿಂದೆ ಭೂಪಿಂದರ್ ಹನಿ ಅವರ ನಿವಾಸ ಮತ್ತು ಇತರ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯ 10 ಕೋಟಿಗೂ ಹೆಚ್ಚು ಆಸ್ತಿ ಜಪ್ತಿ ಮಾಡಿತ್ತು. ಇದರ ಜೊತೆಗೆ 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿತ್ತು.
ಮೊಹಾಲಿ, ಲುಧಿಯಾನಾ, ರೂಪನಗರ, ಫತೇಘರ್ ಸಾಹಿಬ್ ಮತ್ತು ಪಠಾಣ್‌ಕೋಟ್ ಸೇರಿದಂತೆ ಹನ್ನೆರಡು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಎರಡು ದಿನಗಳ ನಂತರ ದಾಳಿ ಮುಕ್ತಾಯಗೊಂಡಿತ್ತು.