ನವದೆಹಲಿ: ಮುಂಗಾರು ಅಧಿವೇಶನದ ವೇಳೆ ರಾಜ್ಯಸಭೆಯ 12 ಮಂದಿ ಸಂಸದರನ್ನು ಅಮಾನತುಗೊಳಿಸಿರುವುದು ಸಂಸತ್ನ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಈ ರೀತಿಯಾಗಿ ಮಾಡುವ ಮೂಲಕ ಸಂಸತ್ ದುರ್ಬಲಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಯತ್ನಿಸಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಆರಂಭವಾಗಿರುವ ಚಳಿಗಾಲದ ಅಧಿವೇಶನದ ವೇಳೆ ಮಾತನಾಡಿದ ಅವರು, ಸರ್ಕಾರ ವಿಪಕ್ಷಗಳ ಸಂಸದರನ್ನು ಯಾವುದೇ ವಿಚಾರಣೆಯಿಲ್ಲದೇ ಅಥವಾ ವಿವರಣೆಯಿಲ್ಲದೆ ಅಮಾನತುಗೊಳಿಸುತ್ತಿದೆ. ಈ ವಿಚಾರವಾಗಿ ಪ್ರತಿಪಕ್ಷಗಳು ಪ್ರತಿಕ್ರಿಯೆ ನೀಡಿದರೆ, ಆಡಳಿತ ಪಕ್ಷಗಳು ದೂಷಿಸುತ್ತವೆ ಎಂದು ಕಪಿಲ್ ಸಿಬಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
’ಸಂಸತ್ ವ್ಯವಸ್ಥೆಯನ್ನ ಸರ್ಕಾರ ದುರ್ಬಲಗೊಳಿಸುತ್ತಿದೆ’
ಸರ್ಕಾರ ಸಂಸತ್ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಸಂಸತ್ ಇಲ್ಲದೇ ತಮಗಿಷ್ಟ ಬಂದಿದ್ದನ್ನು ಮಾಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಮೊದಲು ಚರ್ಚೆ ಇಲ್ಲದೇ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಯಿತು. ಈಗ ಚರ್ಚೆ ಇಲ್ಲದೇ ಅದೇ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ಇಲ್ಲಿ 'ಚರ್ಚೆ ಇಲ್ಲ' ಎಂಬುದು ಗಮನಿಸಬೇಕಾದ ವಿಚಾರ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ತಮ್ಮದೇ ಆದ ಷರತ್ತುಗಳ ಮೇಲೆ ಚರ್ಚೆ ನಡೆಲು ಸರ್ಕಾರ ಬಯಸಿದರೆ, ಸಂಸತ್ ಮತ್ತು ವಿರೋಧ ಪಕ್ಷಗಳ ಅವಶ್ಯಕತೆ ಏನು?, ಇದು ಅಂತಿಮವಾಗಿ ಜನರಲ್ಲಿ ಭ್ರಮನಿರಸನ ಮೂಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅಮಾನತಿನ ವಿರುದ್ಧ ರಾಜಕೀಯ ಹೋರಾಟ
ಸಂಸದರ ಅಮಾನತು ಮಾಡಿದ ವಿರುದ್ಧ ರಾಜಕೀಯ ಹೋರಾಟ ನಡೆಸಬೇಕು ಕಪಿಲ್ ಸಿಬಲ್ ಸೂಚನೆ ನೀಡಿದ್ದು, ಒಬ್ಬರು ನ್ಯಾಯಾಲಯದ ಮೊರೆ ಹೋದರೆ ನ್ಯಾಯಾಲಯದಲ್ಲಿ ಆ ವಿಚಾರ ಸೊರಗುತ್ತದೆ. ಸದನದ ಆಂತರಿಕ ವಿಚಾರಗಳನ್ನು ನಿರ್ಧರಿಸಲು ನ್ಯಾಯಾಯಲಕ್ಕೆ ಅಧಿಕಾರವಿದೆಯೇ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಸಂಸತ್ನ ಮುಂಗಾರು ಅಧಿವೇಶನದಲ್ಲಿ ಎಲಮರಮ್ ಕರೀಂ (ಸಿಪಿಎಂ), ಫುಲೋ ದೇವಿ ನೇತಮ್, ಛಾಯಾ ವರ್ಮಾ, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್ ಮತ್ತು ಕಾಂಗ್ರೆಸ್‌ನ ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ದೋಲಾ ಸೇನ್ ಮತ್ತು ತೃಣಮೂಲ ಕಾಂಗ್ರೆಸ್‌ನ ಶಾಂತಾ ಛೆಟ್ರಿ ಮತ್ತು ಶೀವಸೇನೆಯ ಪ್ರಿಯಾಂಕಾ ಚತುರ್ವೇದಿ ಮತ್ತು ಶಿವಸೇನೆಯ ಅನಿಲ್ ದೇಸಾಯಿ ಅಮಾನತುಗೊಂಡಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಬಡತನ ಈ ನಾಲ್ಕನ್ನೂ ಮುಕ್ತ ಮಾಡಿದ ಮೋದಿ.. ಕಟೀಲ್