ಇಂಫಾಲ (ಮಣಿಪುರ) : ಇಬ್ಬರು ವಿದ್ಯಾರ್ಥಿಗಳ ಹತ್ಯೆಯ ವಿಡಿಯೋ ಹರಿದಾಡುತ್ತಿರುವ ಹಿನ್ನೆಲೆ ಈಶಾನ್ಯ ರಾಜ್ಯ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಅಲ್ಲಿನ ಸರ್ಕಾರ ಸಶಸ್ತ್ರ ಪಡೆಗಳ ಪರಮಾಧಿಕಾರ ಕಾನೂನನ್ನು ಇನ್ನೂ 6 ತಿಂಗಳ ಕಾಲ ವಿಸ್ತರಣೆ ಮಾಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್ ಹಾಕಿದ ಸರ್ಕಾರಿ ವೈದ್ಯರನ್ನು ಅಮಾನತು ಮಾಡಲಾಗಿದೆ.
ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಮತ್ತೆ ರಾಜ್ಯ ಉದ್ವಿಗ್ನ ಸ್ಥಿತಿಗೆ ಮರಳಿದೆ. ಇದರಿಂದ ಸರ್ಕಾರ ಶಾಂತಿ ಸ್ಥಾಪನೆಗಾಗಿ ಹೆಣಗಾಡುತ್ತಿದ್ದು, ಸೇನಾ ಪರಮಾಧಿಕಾರದ ಕಾನೂನನ್ನು ಮತ್ತಷ್ಟು ದಿನ ವಿಸ್ತರಣೆ ಮಾಡುವ ನಿರ್ಧಾರವನ್ನು ರಾಜ್ಯಪಾಲರು ಕೈಗೊಂಡಿದ್ದಾರೆ. ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.
ಸರ್ಕಾರಿ ವೈದ್ಯರ ಅಮಾನತು: ಸರ್ಕಾರಿ ಹುದ್ದೆಯಲ್ಲಿದ್ದವರು ಸಾಮಾಜಿಕವಾಗಿ ವಿವಾದ ಉಂಟು ಮಾಡುವ ಹೇಳಿಕೆ, ಪೋಸ್ಟ್ ಹಾಕಬಾರದು ಎಂಬ ಕಾನೂನು ಇದೆ. ಅದನ್ನು ಮೀರಿದ ಇಲ್ಲಿನ ವೈದ್ಯಕೀಯ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ನೌಕರನ ತಕ್ಕುದಲ್ಲದ ನಡವಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಕಾಮೆಂಟ್ಗಾಗಿ ಕಾಯುತ್ತಿದ್ದ ವೈದ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೇ, ಅಮಾನತಾದ ವೈದ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಇಂಫಾಲ್‌ನಲ್ಲಿರುವ ಪ್ರಧಾನ ಕಚೇರಿಯನ್ನು ಬಿಡಬಾರದು ಎಂದು ಕರಾರು ಹಾಕಲಾಗಿದೆ.
ಇದನ್ನೂ ಓದಿ: ಮಣಿಪುರದಲ್ಲಿ ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ಇಂಫಾಲ್ಗೆ ತೆರಳಿದ ಸಿಬಿಐ ವಿಶೇಷ ನಿರ್ದೇಶಕರ ನೇತೃತ್ವದ ತಂಡ
ಸಿಬಿಐನಿಂದ ವಿದ್ಯಾರ್ಥಿಗಳ ಹತ್ಯೆ ತನಿಖೆ ಆರಂಭ: ವಿದ್ಯಾರ್ಥಿಗಳಿಬ್ಬರ ಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ನೀಡಲಾಗಿದೆ. ತನಿಖಾ ಸಂಸ್ಥೆಯ ವಿಶೇಷ ನಿರ್ದೇಶಕ ಅಜಯ್ ಭಟ್ನಾಗರ್ ಅವರು ತನಿಖೆಯನ್ನು ಪ್ರಾರಂಭಿಸಲು ಬುಧವಾರ ಇಂಫಾಲ್ ತಲುಪಿದ್ದಾರೆ.
ಕ್ರಮಕ್ಕೆ ಪ್ರಧಾನಿ ಮೋದಿಗೆ ಅರಿಕೆ: ಮಣಿಪುರದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಸಮುದಾಯ ಸಂಘರ್ಷವನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಕೋರಿ 11 ವರ್ಷದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡಿರುವ ಕಿರಿಯ ಪರಿಸರ ಹೋರಾಟಗಾರ್ತಿ, ಮಣಿಪುರದಲ್ಲಿ ತಾಂಡವವಾಡುತ್ತಿರುವ ಅಶಾಂತಿಯ ವಿರುದ್ಧ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದ್ದು, ಅತ್ತ ಶೀಘ್ರವೇ ಗಮನ ಹರಿಸಿ ಪರಿಹಾರ ಸೂಚಿಸಬೇಕಿದೆ. ಕೇಂದ್ರ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದಕ್ಕೆ ಹತಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಮೌನ ಬಿಟ್ಟು ಮಣಿಪುರ ಹಿಂಸಾಚಾರ ನಿಲ್ಲಿಸಿ': ಪ್ರಧಾನಿ ಮೋದಿಗೆ 11 ವರ್ಷದ ಹೋರಾಟಗಾರ್ತಿ ಲಿಸಿಪ್ರಿಯಾ ಒತ್ತಾಯ