ಗೋಪಾಲಗಂಜ್ (ಬಿಹಾರ): ಹಳ್ಳಿಗಳಲ್ಲಿ ನೊಣಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ, ಬಿಹಾರದ ಗ್ರಾಮವೊಂದರಲ್ಲಿ ನೊಣಗಳ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಅಲ್ಲಿನ ಜನ ಸರಿಯಾಗಿ ಊಟ ಮಾಡಲೂ ಆಗದಂತಹ ಮತ್ತು ಆ ಗ್ರಾಮದ ಯುವಕರನ್ನು ಮದುವೆಯಾಗಲು ಬೇರೆ ಊರಿನ ಯುವತಿಯರೂ ಕೂಡಾ ಇಷ್ಟಪಡದಂತಹ ಸ್ಥಿತಿ ಇದೆ!.
ಗೋಪಾಲಗಂಜ್ ಜಿಲ್ಲೆಯ ಖ್ವಾಜೆಪುರ್ ಪಂಚಾಯತ್ ವ್ಯಾಪ್ತಿಯ ವಿಕ್ರಮ್‌ಪುರ ಗ್ರಾಮದ ಜನರು ಇಂತಹ ವಿಚಿತ್ರ ಸಮಸ್ಯೆ ನಡುವೆಯೇ ನತದೃಷ್ಟ ಜೀವನ ನಡೆಸುವಂತಾಗಿದೆ. ಈ ನೊಣಗಳ ಹಾವಳಿಯಿಂದ ಇಡೀ ಗ್ರಾಮಸ್ಥರು ರೋಗ ರುಜಿನಗಳ ಭೀತಿಯಲ್ಲಿದ್ದಾರೆ. ಅನೇಕರು ಈಗಾಗಲೇ ಗ್ರಾಮವನ್ನೇ ತೊರೆದು ಬೇರೆಡೆ ವಲಸೆ ಕೂಡ ಹೋಗಿದ್ದಾರೆ.
ಐದು ವರ್ಷಗಳಿಂದಲೂ ಇದೇ ಪರಿಸ್ಥಿತಿ: ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಗ್ರಾಮದ ಜನರನ್ನು ನೊಣಗಳು ಹೊಸದಾಗೇನೂ ಪೀಡಿಸುತ್ತಿಲ್ಲ. ಕಳೆದ ಐದು ವರ್ಷಗಳಿಂದಲೂ ನೊಣಗಳ ಹಾವಳಿಯಲ್ಲೇ ಜನರು ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಸಮೀಪದಲ್ಲಿರುವ ಕೋಳಿ ಫಾರಂಗಳು ಎನ್ನಲಾಗುತ್ತಿದೆ. ಆದರೆ, ನೊಣಗಳ ಕಾಟಕ್ಕೆ ಕಡಿವಾಣ ಹಾಕಬೇಕಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುವುದು ಗ್ರಾಮಸ್ಥರು ಅಸಹಾಯಕ ನುಡಿ.
ಮರಿದು ಬಿದ್ದ ದಾಂಪತ್ಯಗಳು: ವಿಕ್ರಮ್‌ಪುರ ಗ್ರಾಮದಲ್ಲಿ ನೊಣಗಳ ಆರ್ಭಟ ಎಷ್ಟೊಂದು ಆಗಿದೆ ಎಂದರೆ ಅನೇಕರ ದಾಂಪತ್ಯ ಜೀವನಕ್ಕೂ ಕೊಳ್ಳಿ ಇಟ್ಟಿವೆ. ರೋಹಿತ್ ಪಟೇಲ್ ಮತ್ತು ಸತೇಂದ್ರ ಯಾದವ್ ಸೇರಿದಂತೆ ಇತರರ ಪತ್ನಿಯರು ನೊಣಗಳ ಹಾವಳಿಯನ್ನು ತಾಳದೇ ಗಂಡನ ಮನೆ ಬಿಟ್ಟು ಹೋಗಿದ್ದಾರೆ. ಇದೇ ವೇಳೆ ಗ್ರಾಮದ ತೊರೆದು ವಲಸೆ ಹೋಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ.
ಗ್ರಾಮಸ್ಥರು ನೀಡಿರುವ ಮಾಹಿತಿ ಪ್ರಕಾರ, ಇದುವರೆಗೆ ಹತ್ತಕ್ಕೂ ಅಧಿಕ ಕುಟುಂಬಗಳು ಗ್ರಾಮವನ್ನು ಬಿಟ್ಟು ಹೋಗಿವೆ. ಸುಂದರ್ ಪಟೇಲ್, ಸಂದೀಪ್ ಯಾದವ್, ರಾಹುಲ್ ಕುಮಾರ್, ಕಿಶನ್ ಯಾದವ್ ಸೇರಿದಂತೆ ಹಲವರು ತಮ್ಮ ಕುಟುಂಬಸಮೇತ ಗ್ರಾಮದಿಂದ ವಲಸೆ ಹೋಗಿ ಬೇರೆಡೆ ನೆಲೆ ಕಂಡುಕೊಂಡಿದ್ದಾರೆ. ಹೀಗೆ ಗ್ರಾಮಸ್ಥರೇ ತಮ್ಮೂರು ತೊರೆಯುತ್ತಿರುವುದಿಂದ ಬೇರೆಯವರು ಹೋಗಿ ಬರಲು ಹೇಗೆ ಸಾಧ್ಯ ಎಂಬುವುದು ಗ್ರಾಮಸ್ಥರನ್ನು ಕಾಡುತ್ತಿರುವ ಪ್ರಶ್ನೆ.
ಅರ್ಧದಲ್ಲೇ ಎದ್ದು ಹೋದ ಯುವತಿ ಕಡೆಯುವರು: ಇಲ್ಲಿನ ಯುವಕರನ್ನು ಮದುವೆಯಾಗಲು ಬೇರೆ ಗ್ರಾಮದ ಯುವತಿಯರು ಹಿಂದೆಮುಂದೆ ನೋಡುವಂತಾಗಿದೆ. ನೊಣಗಳ ಕಾಟದಿಂದಲೇ ನಿಶ್ಚಯವಾಗಿದ್ದ ಮೂರು ಮದುವೆಗಳು ಈಗಾಗಲೇ ಬಿದ್ದು ಹೋಗಿವೆ. ಗ್ರಾಮದ ಯುವಕನೊಬ್ಬನನ್ನು ನೋಡಲು ಮಧುಬನಿ ಜಿಲ್ಲೆಯಿಂದ ಯುವತಿ ಕಡೆಯವರು ಬಂದಿದ್ದರು. ಯುವಕನ ಮನೆ ಹೋಗಿ ಉಪಹಾರ ತಿನ್ನುತ್ತಿದ್ದರು. ಆದರೆ, ನೊಣಗಳ ಹಾವಳಿಯಿಂದ ಉಪಹಾರವನ್ನೂ ಸೇವಿಸಲಾಗದೆ ಅರ್ಧಕ್ಕೆ ಬಿಟ್ಟು ಎದ್ದು ಹೋದರು ಎನ್ನುತ್ತಾರೆ ಯುವಕ ಅನಿಕೇತ್.
ಸೊಳ್ಳೆ ಪರದೆಯೇ ರಕ್ಷಾಕವಚ: ನೊಣಗಳಿಂದ ರಕ್ಷಣೆ ಪಡೆಯಬೇಕಾದರೆ ಹಗಲು-ರಾತ್ರಿ ಎನ್ನದೇ ಸೊಳ್ಳೆ ಪರದೆ ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಊಟ ಮಾಡಲು, ಮಕ್ಕಳು ಓದಲು, ನೆಮ್ಮದಿಯಿಂದ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕಾದರೂ ಸೊಳ್ಳೆ ಪರದೆ ಬೇಕೇ ಬೇಕು. ಸೊಳ್ಳೆ ಪರದೆ ಇರದೇ ಹೋದರೆ ಟೀ ಕೂಡಾ ಕುಡಿಯಲು ಸಾಧ್ಯವಿಲ್ಲ. ಹೀಗಾಗಿ ನೊಣಗಳಿಂದ ಮುಕ್ತಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರೂ ಇದುವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ತೋಡಿಕೊಂಡರು.
ಇದನ್ನೂ ಓದಿ: ಮನುಷ್ಯರಿಗೆ ಇದ್ದ ಆ್ಯಂಬುಲೆನ್ಸ್ಗಳು ಈಗ ಮರಗಳಿಗೂ ವಿಸ್ತರಣೆ: ಹೇಗಿದೆ ಚಿಕಿತ್ಸೆ ಕಾರ್ಯ?