ಹೈದರಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಗೋಪಾಲ ಇಟಾಲಿಯಾ ಈಗ ರಾಜಕೀಯ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ನೌಕರರಾಗಿದ್ದ ಇವರು ನೌಕರಿ ಬಿಟ್ಟು ರಾಜಕೀಯ ಸೇರಿದ್ದರು. ಸರ್ಕಾರದ ವಿರುದ್ಧ ಪ್ರತಿಭಟಿಸಿ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರ ಮೇಲೆ ಶೂ ಎಸೆದವರು ಇವರೇ. ಆಮ್ ಆದ್ಮಿ ಪಕ್ಷಕ್ಕೆ ಸೇರಿದ ನಂತರ ಅವರು ಪಕ್ಷದಲ್ಲಿ ಪ್ರಮುಖ ಸ್ಥಾನ ಹೇಗೆ ಪಡೆದುಕೊಂಡರು ಎಂಬ ಮಾಹಿತಿ ಇಲ್ಲಿದೆ.
ಆಮ್ ಆದ್ಮಿ ಪಕ್ಷದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಗೋಪಾಲ್ ಇಟಾಲಿಯಾ ಪೊಲೀಸ್ ಕಾನ್ಸ್‌ಟೇಬಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಹಾಗೂ ಮಾಜಿ ಮುಖ್ಯಮಂತ್ರಿಗೆ ಶೂ ಎಸೆದ ಘಟನೆ ಚರ್ಚೆಗೆ ಗ್ರಾಸವಾಯಿತು. ನಂತರ ಅವರು ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಮತ್ತು ಸೂರತ್‌ನ ಸ್ಥಳೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಸ್ತುತ, ಅವರನ್ನು ಪ್ರಧಾನಿ ಹುದ್ದೆಯ ಸ್ಪರ್ಧಿ ಎಂದು ಹೇಳಲಾಗುತ್ತಿದೆ.
ಇಟಾಲಿಯಾ ಜೀವನ: ಗೋಪಾಲ್ ಇಟಾಲಿಯಾ ಅವರು 21 ಜುಲೈ 1989 ರಂದು ಗುಜರಾತ್‌ನ ಬೊಟಾಡ್‌ನಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭಾವನಗರ ಜಿಲ್ಲೆಯ ಉಮ್ರಾಲಾ ತಾಲೂಕಿನ ತಿಂಬಿ ಗ್ರಾಮದಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ಧೋಲಾ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಅವರು ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಕಾನ್ಸ್‌ಟೇಬಲ್ ಆಗಿ ವೃತ್ತಿ ಜೀವನ ಆರಂಭ: ಜನವರಿ 2013 ರಿಂದ ಗೋಪಾಲ್ ಇಟಾಲಿಯಾ ಅಹಮದಾಬಾದ್ ಪೊಲೀಸ್‌ನ ಮಧುಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡಿದರು. ನಂತರ 2014 ರಲ್ಲಿ ಅಹಮದಾಬಾದ್ ಕಲೆಕ್ಟರ್ ಕಚೇರಿಯ ಅಡಿ ಧಂಡುಕಾ ತಾಲೂಕು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕಂದಾಯ ಕ್ಲರ್ಕ್ ಆಗಿ ಕೆಲಸ ಮಾಡಿದರು.
ನಿರುದ್ಯೋಗಿ ಯುವಕರ ಹಕ್ಕುಗಳ ಜೊತೆಗೆ ನಾಗರಿಕರ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಸರ್ಕಾರಿ ನೌಕರಿಯಲ್ಲಿದ್ದಾಗ ಇಟಾಲಿಯಾ ಜನವರಿ 2017 ರಿಂದೀಚೆಗೆ ಖ್ಯಾತಿ ಪಡೆಯತೊಡಗಿದರು. ಇದೇ ವೇಳೆ ಅವರು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೆ ಕರೆ ಮಾಡಿ ಗುಜರಾತ್‌ನಲ್ಲಿ ಸಾರಾಯಿ ನಿಷೇಧ ನೀತಿಯ ಸಂಪೂರ್ಣ ಉಲ್ಲಂಘನೆ ಮತ್ತು ಸರ್ಕಾರಿ ಅಧಿಕಾರಿಗಳ ಕುತಂತ್ರದ ಬಗ್ಗೆ ದೂರು ನೀಡಿದರು. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಜಿ ಗೃಹ ಸಚಿವರಿಗೆ ಶೂ ಎಸೆದು ಕುಖ್ಯಾತಿ: ಮಾರ್ಚ್ 2017 ರಲ್ಲಿ, ಗೋಪಾಲ್ ಇಟಾಲಿಯಾ ಅವರು ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರ ಮೇಲೆ ಶೂ ಎಸೆದು, ಭ್ರಷ್ಟಾಚಾರ ದೂರ ಮಾಡಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸುದ್ದಿಯಲ್ಲಿದ್ದರು. 2018 ಮತ್ತು 2020 ರ ನಡುವೆ ಗೋಪಾಲ್ ಇಟಾಲಿಯಾ ಸಾಮಾಜಿಕ ಸಂಸ್ಥೆ ಪಾಟಿದಾರ್ ಆರಕ್ಷಣ್ ಆಂದೋಲನ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದರು. 2018 ರಲ್ಲಿ ಅವರು ಸಂವಿಧಾನ ಕಾಯಿದೆಯ ಬಗ್ಗೆ ಜಾಗೃತಿ ಮೂಡಿಸಲು ಕಾನೂನ್ ಕಥಾ ಎಂಬ ಸಾರ್ವಜನಿಕ ಸಭೆಗಳನ್ನು ಆಯೋಜಿಸಿದರು.
2020 ರಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆ: ಗೋಪಾಲ್ ಇಟಾಲಿಯಾ ಅವರು ಜೂನ್ 2020 ರಲ್ಲಿ ಗುಜರಾತ್‌ನ ರಾಜ್ಯ ಉಪಾಧ್ಯಕ್ಷರಾಗಿ ಆಮ್ ಆದ್ಮಿ ಪಕ್ಷವನ್ನು ಸೇರಿದರು. ಅವರನ್ನು 12 ಡಿಸೆಂಬರ್ 2020 ರಂದು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
12ನೇ ಡಿಸೆಂಬರ್ 2021 ರಂದು ನಡೆದ 186 ಹೆಡ್ ಕ್ಲರ್ಕ್‌ಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯಲ್ಲಿ 88,000 ಅಭ್ಯರ್ಥಿಗಳು ಹಾಜರಾಗಿದ್ದರು. ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪರೀಕ್ಷೆಗಳನ್ನು ನಡೆಸುವ ಗುಜರಾತ್ ಅಧೀನ ಸೇವೆಗಳ ಆಯ್ಕೆ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಭಾರತೀಯ ಜನತಾ ಪಕ್ಷದ ನಾಯಕ ಅಸಿತ್ ವೋರಾ ಅವರನ್ನು ತೆಗೆದುಹಾಕುವಂತೆ ಆಗ್ರಹಿಸಿ 500 ಎಎಪಿ ಸದಸ್ಯರೊಂದಿಗೆ ಗೋಪಾಲ್ ಇಟಾಲಿಯಾ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ನಡೆಸಿದ್ದಕ್ಕೆ ಇವರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಗೋಪಾಲ್ ಇಟಾಲಿಯಾ ಮತ್ತು ಇತರರು 10 ದಿನ ಜೈಲಿನಲ್ಲಿ ಕಳೆದ ನಂತರ ಅವರಿಗೆ ಜಾಮೀನು ಸಿಕ್ಕಿತ್ತು.
ಇದನ್ನು ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಎಎಪಿ ಸಿಎಂ ಅಭ್ಯರ್ಥಿ ಘೋಷಿಸಿದ ಕೇಜ್ರಿವಾಲ್