ದಂತೇವಾಡ : ಇಲ್ಲಿನ ಭಾನ್ಸಿ-ಕಮಲೂರ್ ರೈಲ್ವೆ ನಿಲ್ದಾಣಗಳ ಮಧ್ಯೆ ಗೂಡ್ಸ್ ರೈಲೊಂದು ಹಳಿ ತಪ್ಪಿದೆ. ಇದರಿಂದಾಗಿ 17ಕ್ಕೂ ಹೆಚ್ಚು ಬೋಗಿಗಳು ಜಖಂಗೊಂಡಿರುವ ಘಟನೆ ಸಂಭವಿಸಿದೆ. ಆದ್ರೆ, ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಕಬ್ಬಿಣದ ಅದಿರು ಖಾಲಿ ಮಾಡಿ ಕಿರಂಡೋಲ್‌ನಿಂದ ವಿಶಾಖಪಟ್ಟಣಕ್ಕೆ ತೆರಳುವ ಮಾರ್ಗದಲ್ಲಿ ಭಾನ್ಸಿ-ಕಮಲೂರು ರೈಲ್ವೆ ನಿಲ್ದಾಣಗಳ ನಡುವೆ ಮುಂಜಾನೆ 4.05ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇದರಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ದಾಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಈ ಘಟನೆಯ ಹಿಂದೆ ನಕ್ಸಲೀಯರ ಕೈವಾಡವಿದೆ ಎಂದು ಮೊದಲು ಅಧಿಕಾರಿಗಳು ಶಂಕಿಸಿದ್ದರು. ಬಳಿಕ ಘಟನೆಯಲ್ಲಿ ನಕ್ಸಲರ ಕೈವಾಡವಿಲ್ಲ ಎಂದು ಅವರು ತೀರ್ಮಾನಿಸಿದರು.
ಏಕೆಂದರೆ, ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ನಕ್ಸಲ್ ಚಟುವಟಿಕೆಗಳಾಗಲಿ, ಮಾವೋವಾದಿ ಬ್ಯಾನರ್, ಪೋಸ್ಟರ್ ಅಥವಾ ಚಲನವಲನಗಳು ಕಂಡು ಬಂದಿಲ್ಲ. ತಾಂತ್ರಿಕ ಸಮಸ್ಯೆಯಿಂದಾಗಿ ಅಪಘಾತ ಸಂಭವಿಸಿರಬಹುದು. ತನಿಖೆಯ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹಳಿಗಳನ್ನ ಪುನರ್ ನಿರ್ಮಾಣ ಮಾಡುವುದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.