ಪಣಜಿ: ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವು (ಸಿಎಲ್‌ಪಿ) ಆಡಳಿತಾರೂಢ ಬಿಜೆಪಿಯೊಂದಿಗೆ ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ನೀಡಿರುವುದಾಗಿ ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್ ಗುರುವಾರ ಹೇಳಿದ್ದಾರೆ. ವಿಲೀನವಾಗಲು ಬಯಸಿದ ಕಾಂಗ್ರೆಸ್ ಶಾಸಕರು ಸಲ್ಲಿಸಿದ ಪತ್ರವನ್ನು ಪರಿಶೀಲಿಸಿದಾಗ, ಅವರ ಗುಂಪಿಗೆ ಅಗತ್ಯ ಸದಸ್ಯರ ಬೆಂಬಲವಿರುವುದು ಸಾಬೀತಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲೋಬೋ ಮತ್ತು ಹಿರಿಯ ನಾಯಕ ದಿಗಂಬರ್ ಕಾಮತ್ ಸೇರಿದಂತೆ 11 ಕಾಂಗ್ರೆಸ್ ಶಾಸಕರ ಪೈಕಿ ಎಂಟು ಮಂದಿ ಪಕ್ಷಕ್ಕೆ ಗುಡ್ ಬೈ ಹೇಳಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ನಂತರ ಗೋವಾ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಮೈಕೆಲ್ ಲೋಬೋ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮ್ಮುಖದಲ್ಲಿ ಸೆಪ್ಟೆಂಬರ್ 13 ರಂದು ವಿಲೀನದ ನಿರ್ಣಯ ಮಂಡಿಸಿದ್ದರು.
ಕೇಸರಿ ಪಾಳಯ ಸೇರಿದ ಇತರ ಕಾಂಗ್ರೆಸ್ ಶಾಸಕರಲ್ಲಿ ಡೆಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫರ್ನಾಂಡಿಸ್ ಸೇರಿದ್ದಾರೆ.
ಕಾಂಗ್ರೆಸ್‌ನ ಬಲ ಮೂರಕ್ಕೆ ಇಳಿದಿದ್ದು, ಈಗ ಗೋವಾ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳಲು ಬೇಕಾದಷ್ಟು ಸಂಖ್ಯಾ ಬಲ ಹೊಂದಿಲ್ಲ.
ಇದನ್ನೂ ಓದಿ: 4 ದಶಕಗಳ ಮಹದಾಯಿ ಹೋರಾಟಕ್ಕೆ ಇಚ್ಛಾಶಕ್ತಿ ಕೊರತೆ; ಹೋರಾಟಗಾರರ ಆಕ್ರೋಶ