ಪಣಜಿ:ಕೊರೊನಾ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ಕರ್ಫ್ಯೂವನ್ನು ಗೋವಾ ಸರ್ಕಾರವು ಜೂನ್ 7 ರವರೆಗೆ ವಿಸ್ತರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಶನಿವಾರ ತಿಳಿಸಿದೆ.
"2021 ರ ಜೂನ್ 7 ರಂದು ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ಆಯಾ ಜಿಲ್ಲಾಧಿಕಾರಿಗಳು ಹೊರಡಿಸಬೇಕು" ಎಂದು ಗೋವಾ ಸಿಎಂ ಕಚೇರಿ ಟ್ವೀಟ್ ಮಾಡಿದೆ.
ಮೇ 17 ರಂದು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆ ಗೋವಾ ಸಿಎಂ ಪ್ರಮೋದ್ ಸಾವಂತ್ ಗೋವಾದಲ್ಲಿ ಮೇ 9 ರಿಂದ ಮೇ 23 ರವರೆಗೆ ರಾಜ್ಯ ಮಟ್ಟದ ಕರ್ಫ್ಯೂ ಘೋಷಿಸಿದ್ದರು. ನಂತರ ಕರ್ಫ್ಯೂ ಅನ್ನು ಮೇ 31 ಕ್ಕೆ ವಿಸ್ತರಿಸಲಾಗಿತ್ತು. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಜೂನ್ 7 ರವರೆಗೆ ವಿಸ್ತರಣೆ ಮಾಡಲಾಗಿದೆ.
ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳು, ಕಿರಾಣಿ ಅಂಗಡಿಗಳು, ಮದ್ಯದಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ತೆರೆದಿರಲು ಅವಕಾಶವಿದೆ. ಮೆಡಿಕಲ್ ಮತ್ತು ರೆಸ್ಟೋರೆಂಟ್ಗಳು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಗೋವಾದಲ್ಲಿ ಪ್ರಸ್ತುತ 15,326 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಮತ್ತು ಕೋವಿಡ್ ಸಂಬಂಧಿತ ತೊಂದರೆಗಳಿಂದ 2,570 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಇಲ್ಲಿವರೆಗೆ ಗೋವಾದಲ್ಲಿ 1,53,456 ಜನರಿಗೆ ಕೊರೊನಾ ಪಾಸಿಟಿವ್ ಬಂದದ್ದು ವರದಿಯಾಗಿದೆ.