ಪಣಜಿ(ಗೋವಾ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ದುರ್ಗಾದೇವಿಗೆ ಹೋಲಿಸುವ ಮೂಲಕ ಗೋವಾ ಫಾರ್ವರ್ಡ್ ಪಾರ್ಟಿ (GFP) ನಾಯಕರೊಬ್ಬರು ಆಂತರಿಕ ಗೊಂದಲ ಉಂಟುಮಾಡಿದ್ದಾರೆ. ಅವರು ಕರಾವಳಿ ರಾಜ್ಯದಲ್ಲಿ "ಭಸ್ಮಾಸುರ" ಬಿಜೆಪಿ ಸರ್ಕಾರವನ್ನು ತೊಡೆದುಹಾಕುವುದಾಗಿ ಹೇಳಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಈ "ಭಸ್ಮಾಸುರ್" ಬಿಜೆಪಿ ಸರ್ಕಾರವನ್ನು ತೊಡೆದುಹಾಕಲು ಪಶ್ಚಿಮ ಬಂಗಾಳದಿಂದ "ದುರ್ಗೆ"ಯನ್ನು ಗೋವಾಗೆ ತರುವ ಅಗತ್ಯವಿದೆ ಎಂದು ಜಿಎಫ್‌ಪಿ ಕಾರ್ಯಾಧ್ಯಕ್ಷ ಕಿರಣ್ ಕಂದೋಲ್ಕರ್ ಹೇಳಿದ್ದಾರೆ.
ಮುಂದಿನ ವರ್ಷದ ಗೋವಾ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (TMC) ಯೊಂದಿಗೆ ಜಿಎಫ್‌ಪಿ ಮಾತುಕತೆ ನಡೆಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಗೋವಾದ ಜನರು ಇಂತಹ ಹೋಲಿಕೆಯನ್ನು ಎಂದಿಗೂ ಸಹಿಸುವುದಿಲ್ಲ. ದುರ್ಗಾದೇವಿಯನ್ನು ಮಾನವನೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ನಂತರ ಏನೇನು ಬೆಳವಣಿಗೆಗಳು ಆಗಿವೆ ಎಂಬುದು ಗೊತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ಯಾನರ್ಜಿಯ ಹೆಸರನ್ನು ತೆಗೆದುಕೊಳ್ಳದೆ, ಸಾವಂತ್ ಅವರು ಆ ವ್ಯಕ್ತಿ ಮತ್ತು ಆ ಪಕ್ಷ (ಟಿಎಂಸಿ) ಪಶ್ಚಿಮ ಬಂಗಾಳ ಚುನಾವಣೆಯ ನಂತರ ಜನರನ್ನು ಹೇಗೆ ಕೊಂದರು ಎಂದು ಜನರು ನೋಡಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಟಿಎಂಸಿ ಕಳೆದ ತಿಂಗಳು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು.