ಆಂಧ್ರ ಪ್ರದೇಶ: ಹಳ್ಳಿಗಳಿಗೆ ಹೋಗಿ ಅಲ್ಲಿ ಸರ್ಕಾರಿ ಯೋಜನೆಗಳು ಹೇಗೆ ಅನುಷ್ಠಾನಗೊಂಡಿವೆ ಎಂಬುದರ ಕುರಿತು ಅಧ್ಯಯನ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಶ್ರೀ ಪದ್ಮಾವತಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಅವರು ಸಂವಾದ ನಡೆಸಿದರು.
ಹಳ್ಳಿಗಳಲ್ಲಿ 2 ರಿಂದ 3 ದಿನಗಳ ಕಾಲ ಉಳಿದುಕೊಂಡು ಅಲ್ಲಿನ ಜನರು ಹೇಗೆ ಬದುಕುತ್ತಿದ್ದಾರೆ, ಮಕ್ಕಳು, ಪುರುಷರು ಹಾಗೂ ಮಹಿಳೆಯರಿಗೆ ಸರ್ಕಾರದ ಯೋಜನೆಗಳು ತಲುಪುತ್ತಿವೆಯೇ? ಇಲ್ಲವೇ ಎಂಬುದನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಿ. ನೀವು ಹಳ್ಳಿಗಳಿಗೆ ಹೋದರೆ ಅಲ್ಲಿನ ಜನರಿಗೆ ಯಾವ ಸರ್ಕಾರಿ ಯೋಜನೆಗಳು ಬೇಕು ಎಂಬುದು ಬೇಗ ತಿಳಿಯುತ್ತದೆ. ಅಷ್ಟೇ ಅಲ್ಲ, ನೀವು ಐಎಎಸ್, ಐಎಫ್ಎಸ್ ಅಧಿಕಾರಿಗಳು, ಇಂಜಿನಿಯರ್ ಅಥವಾ ಪೊಲೀಸ್ ಅಧಿಕಾರಿಗಳಾದರೆ ಯೋಜನೆಗಳನ್ನು ರೂಪಿಸಲು ಕೂಡಾ ಇದು ನಿಮಗೆ ಸಹಕಾರಿ ಎಂದು ಹೇಳಿದರು.
ಹಿಂದುಳಿದ ಹಳ್ಳಿಗಳನ್ನು ಎನ್ಎಸ್ಎಸ್ (ರಾಷ್ಟ್ರೀಯ ಸೇವಾ ಯೋಜನೆ)ಗೆ ದತ್ತು ಕೊಡುವಂತೆಯೂ ನಾನು ವಿಶ್ವವಿದ್ಯಾಲಯದ ಉಪಕುಲಪತಿಗಳೊಂದಿಗೆ ಮಾತನಾಡಿದ್ದೇನೆ. ಅಲ್ಲಿನ ಜನರಿಗೆ ಯಾವ ಯೋಜನೆ ಬೇಕಾಗಿದೆ ಮತ್ತು ಅದನ್ನು ಹೇಗೆ ಅಭಿವೃದ್ದಿಪಡಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮುರ್ಮು ವಿವರಿಸಿದರು. ಹೆಣ್ಣು ಮಕ್ಕಳು ಸಹ ಗಂಡು ಮಕ್ಕಳಷ್ಟೇ ಪ್ರಸಿದ್ಧಿಗಳಿಸುತ್ತಿದ್ದು ಹಾಕಿ, ಕ್ರಿಕೆಟ್, ಕುಸ್ತಿ, ಅಥ್ಲೆಟಿಕ್ಸ್ ಸೇರಿದಂತೆ ಇನ್ನೂ ಆನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಗ ಮತ್ತು ಮಗಳು ಎಂಬ ತಾರತಮ್ಯ ಮಾಡದೆ, ಇಬ್ಬರಿಗೂ ಅದೇ ಪ್ರೀತಿ, ಶಿಕ್ಷಣ ಮತ್ತು ಸ್ವಾವಲಂಬನೆ ಬದುಕು ನೀಡಿ ಎಂದು ಮುರ್ಮು ಪೋಷಕರಿಗೂ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.