ಧನ್ಬಾದ್ (ಜಾರ್ಖಂಡ್): ಜಿಲ್ಲೆಯಲ್ಲಿ ಗುರುವಾರ ಲಘು ವಿಮಾನ ಅಪಘಾತ ಸಂಭವಿಸಿದೆ. ಹಾರಾಟದ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ದಿಢೀರ್ ಮನೆಯೊಂದಕ್ಕೆ ಅಪ್ಪಳಿಸಿದೆ. ಪೈಲಟ್ ಹಾಗು 14 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿಯಂತೆ, ಗುರುವಾರ ಮಧ್ಯಾಹ್ನ ನಗರದ ಬರ್ವಾಡ ಏರೋಡ್ರೋಮ್‌ನಿಂದ ವಿಮಾನ ಟೇಕಾಫ್ ಆಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಬಿರ್ಸಾ ಮುಂಡಾ ಪಾರ್ಕ್‌ನಲ್ಲಿ ಪತನಗೊಂಡಿದೆ. ಗ್ಲೈಡರ್ ಪತನದ ಬಗ್ಗೆ ಮಾಹಿತಿ ಬಂದ ನಂತರ ಸ್ಥಳೀಯ ಆಡಳಿತ ಕೂಡ ಎಚ್ಚೆತ್ತುಕೊಂಡಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ಒದಗಿಸಿದ್ದಾರೆ.
ಕಲ್ಲಿದ್ದಲು ಕ್ಷೇತ್ರಗಳ ಮೇಲೆ ವೈಮಾನಿಕ ಪ್ರವಾಸ ನಡೆಸುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿತ್ತು. ಇದರಡಿಯಲ್ಲಿ ಗ್ಲೈಡರ್ ಅನ್ನು ಹಾರಾಟಕ್ಕೆ ಬಳಸಲಾಗುತ್ತಿದೆ. ತಾಂತ್ರಿಕ ದೋಷದೊಂದಿಗೇ ಗ್ಲೈಡರ್ ಟೇಕಾಫ್ ಆಗಿತ್ತು. ಹೀಗಾಗಿ ಪೈಲಟ್ ನಿಯಂತ್ರಣಕ್ಕೆ ಸಿಗದೆ ಧನ್‌ಬಾದ್‌ನ ಬಿರ್ಸಾ ಮುಂಡಾ ಪಾರ್ಕ್ ಸಮೀಪದ ಮನೆಯೊಂದಕ್ಕೆ ಅಪ್ಪಳಿಸಿದೆ.
ವಿಮಾನ ಜಖಂಗೊಂಡಿದೆ. ಪೈಲಟ್ ಹಾಗು ಬಾಲಕ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಇದೆ. ಸ್ಥಳೀಯರು ಘಟನಾ ಸ್ಥಳ ತಲುಪಿದ ಕೂಡಲೇ ಗ್ಲೈಡರ್ನಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಗ್ಲೈಡರ್ ಪ್ರವಾಸವನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದೆ. ಆ ಬಳಿಕ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು.
ಅಪಘಾತದ ದೃಶ್ಯ ಸೆರೆ : ವಿಮಾನ ಪತನಗೊಳ್ಳುತ್ತಿರುವ ದೃಶ್ಯ ಬಾಲಕನ ಮೊಬೈಲ್ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದೆ. ಉನ್ನತಾಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ.
ಇಬ್ಬರು ಪೈಟಲ್ ಸಾವು: ಕೆಲ ದಿನಗಳ ಹಿಂದೆ ತರಬೇತಿ ವಿಮಾನವೊಂದು ಪತನಗೊಂಡು ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿತ್ತು. ಆಗ ವಿಮಾನದ ಅವಶೇಷಗಳಲ್ಲಿ ಸುಟ್ಟ ಹೋದ ಮೃತ ದೇಹವೊಂದು ಪತ್ತೆಯಾಗಿತ್ತು.
ಪತನಗೊಂಡ ಈ ವಿಮಾನವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ಹಾರಾಟ ಮಾಡಿತ್ತು. ಆದರೆ, ಇದಾದ ಕೆಲವೊತ್ತಿನ ನಂತರ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿ ಜಿಲ್ಲೆಯ ಗಡಿಯ ಬಳಿ ಪತನಗೊಂಡಿತ್ತು. ಲಾಂಜಿ ಮತ್ತು ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭಕ್ಕುಟೋಲಾ ಬೆಟ್ಟದ ಮೇಲೆ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳಿಗೆ ತಿಳಿದು ಬಂದಿತ್ತು.
ಈ ಘಟನೆಯ ಮಾಹಿತಿ ಪಡೆದ ಬಾಲಘಾಟ್ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಮಹಿಳಾ ಟ್ರೈನಿ ಪೈಲಟ್ ಮತ್ತು ಪೈಲಟ್ ಸೇರಿ ಇಬ್ಬರು ಮೃತಪಟ್ಟಿರುವುದು ಖಚಿತವಾಗಿತ್ತು. ಮೃತರನ್ನು ಮಹಿಳಾ ಟ್ರೈನಿ ಪೈಲಟ್ ರುಕ್ಷಾಂಕಾ ಹಾಗೂ ಪೈಲಟ್ ಮೋಹಿತ್ ಎಂದು ಗುರುತಿಸಲಾಗಿತ್ತು. ಈ ಘಟನೆ ಮತ್ತು ಪೈಲಟ್ಗಳ ಸಾವಿನ ಬಗ್ಗೆ ಮಹಾರಾಷ್ಟ್ರದ ಗೊಂಡಿಯಾ ಎಟಿಸಿಯ ಎಜಿಎಂ ಕಮಲೇಶ್ ಮೆಶ್ರಾಮ್ ದೃಢಪಡಿಸಿದ್ದರು.
ಇದನ್ನೂ ಓದಿ: ತರಬೇತಿ ವಿಮಾನ ಪತನ: ಮಹಿಳಾ ಟ್ರೈನಿ ಪೈಲಟ್ ಸೇರಿ ಇಬ್ಬರ ಸಾವು