ನವದೆಹಲಿ: ಅರಣ್ಯ ಕಾವಲುಗಾರರಿಗೆ ಬಂದೂಕು ಮತ್ತು ಗುಂಡು ನಿರೋಧಕ ಜಾಕೆಟ್‌ಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನಿರಾಯುಧ ಅರಣ್ಯ ಅಧಿಕಾರಿಗಳ ಮೇಲೆ ಬೇಟೆಗಾರರು ನಡೆಸುತ್ತಿರುವ ಕ್ರೂರ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಅದೇಶ ನೀಡಿದೆ. ಅರಣ್ಯ ಅಧಿಕಾರಿಗಳು ಚಪ್ಪಲಿ ಧರಿಸಿ ಕೋಲುಗಳಿಂದ ಶಸ್ತ್ರಸಜ್ಜಿತರಾಗಿರುವುದನ್ನು ನೋಡುವುದು ಅತ್ಯಂತ ದುಃಖಕರವಾಗಿದೆ ಎಂದು ಇದೇ ವೇಳೆ ಪೀಠ ಬೇಸರ ವ್ಯಕ್ತಪಡಿಸಿದೆ.
ಶಸ್ತ್ರಾಸ್ತ್ರವಿಲ್ಲದ ಅಧಿಕಾರಿಗಳು ಭಾರಿ ಶಸ್ತ್ರಸಜ್ಜಿತ ಕಳ್ಳ ಬೇಟೆಗಾರರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಫಾರೆಸ್ಟ್ ರೇಂಜರ್ ಅವರು ನಗರದ ಪೊಲೀಸರಂತೆ ಸಹಾಯಕ್ಕಾಗಿ ಕರೆ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಕಾಡಿನಲ್ಲಿ ಅವರಿಗೆ ಸಹಾಯ ಮಾಡಲು ಯಾರೂ ಇಲ್ಲ ಎಂದು ಪೀಠ ಕಳವಳ ವ್ಯಕ್ತಪಡಿಸಿತು.
ಈ ಹಿಂದೆ ಅರಣ್ಯ ಅಧಿಕಾರಿಗಳು ಪ್ಯಾಂಗೊಲಿನ್ಗಳನ್ನು ವಶಪಡಿಸಿಕೊಂಡಿದ್ದನ್ನು ಮುಖ್ಯ ನ್ಯಾಯಮೂರ್ತಿ ನೆನಪಿಸಿಕೊಂಡರು. ಇವುಗಳಿಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ದಂಧೆ ಮಿಲಿಯನ್ ಡಾಲರ್ಗಳಿಗೂ ಮೀರಿದೆ. ಪ್ರಬಲ ಸಂಘಟಿತ ಗ್ಯಾಂಗ್‌ಗಳು ಇದರ ಹಿಂದೆ ಇವೆ. ಹೀಗಾಗಿ ಅರಣ್ಯ ಅಧಿಕಾರಿಗಳನ್ನು ಶಸ್ತ್ರಸಜ್ಜಿತಗೊಳಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಈ ಸಲಹೆಯನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒಪ್ಪಿದ್ದು, ಕೇಂದ್ರ ಸರ್ಕಾರವು ಅಂತಹ ಸಾಧ್ಯತೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತದೆ ಎಂದು ಹೇಳಿದ್ದಾರೆ.