ಸೂರತ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಉತ್ತಮ ಫಲಿತಾಂಶ ಪಡೆದ ಬಳಿಕ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಇದೀಗ 2022ರ ಗುಜರಾತ್ ವಿಧಾನಸಭಾ ಚುನಾವಣೆಯತ್ತ ದೃಷ್ಟಿ ಹಾಯಿಸಿದ್ದಾರೆ.
ಶುಕ್ರವಾರ ಸೂರತ್‌ಗೆ ಆಗಮಿಸಿ ರೋಡ್ ಶೋ ನಡೆಸಿದ ಕೇಜ್ರಿವಾಲ್, ನಗರದಲ್ಲಿ ಹೊಸದಾಗಿ ಆಯ್ಕೆಯಾದ 27 ಕಾರ್ಪೊರೇಟರ್‌ಗಳಿಗೆ ಅಭಿನಂದಿಸಿದರು. ನಿಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷವು ರಾಜ್ಯದ ಜನರಿಂದ ಮತಗಳನ್ನು ಪಡೆಯಲಿದೆ ಎಂದು ಹೇಳಿದರು.
ಫೆ.21 ರಂದು ಸೂರತ್ ಸೇರಿದಂತೆ ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿತ್ತು. 120ರಲ್ಲಿ 93 ಸ್ಥಾನಗಳನ್ನು ಗೆಲ್ಲುವ ಮೂಲಕ ಸೂರತ್ ಮಹಾನಗರ ಪಾಲಿಕೆಯ (ಎಸ್‌ಎಂಸಿ) ಅಧಿಕಾರವನ್ನು ಬಿಜೆಪಿ ಉಳಿಸಿಕೊಂಡಿದೆ. ಉಳಿದ 27 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಪಡೆದುಕೊಂಡಿದ್ದು, ಒಂದೇ ಒಂದು ಸ್ಥಾನವನ್ನು ಗೆಲ್ಲದೇ ಕಾಂಗ್ರೆಸ್ ವಿಫಲವಾಗಿದೆ.
ಪಕ್ಷದ ಕಾರ್ಪೊರೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, "ಗುಜರಾತ್ ಜನರು ನಿಮ್ಮನ್ನು ಬಹಳ ಭರವಸೆಯಿಂದ ನೋಡುತ್ತಿದ್ದಾರೆ. ನಮ್ಮ ಮೊದಲ ಪ್ರಯತ್ನದಲ್ಲಿ ದೆಹಲಿಯಲ್ಲಿ ಎಎಪಿ 28 ವಿಧಾನಸಭೆ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. ಅಣ್ಣಾ ಹಜಾರೆ ಜೊತೆಗಿನ ಚಳವಳಿಯಲ್ಲಿ ಭಾಗಿಯಾಗಿದ್ದ ನಾವು ನಿಜವಾದ ದೇಶಭಕ್ತರು, ಜನರು ನಮ್ಮನ್ನು ನಂಬಿ ಅಧಿಕಾರಕ್ಕೆ ತಂದಿದ್ದರು. ಸಾಕಷ್ಟು ಜನಪರ ಕೆಲಸ ಮಾಡಿದ್ದಕ್ಕೆ ಎರಡನೇ ಚುನಾವಣೆಯಲ್ಲಿ ನಮಗೆ 67 ಸ್ಥಾನಗಳನ್ನು ನೀಡಿದರು ಎಂದರು.
ಜನರ ನಂಬಿಕೆಯೇ ನಿಜವಾದ ಸಂಪತ್ತು
ಈಗ ಗುಜರಾತ್‌ನ ಆರು ಕೋಟಿ ಜನರು ಆಪ್ನ 27 ಕಾರ್ಪೊರೇಟರ್ಗಳ ಕೆಲಸವನ್ನು ಗಮನಿಸಲಿದ್ದಾರೆ. ನೀವು ಉತ್ತಮ ಆಡಳಿತ ನೀಡಿದರೆ, 2022 ರಲ್ಲಿ ಕ್ರಾಂತಿ ಉಂಟಾಗುತ್ತದೆ. ಬಿಜೆಪಿಯವರು ತಮ್ಮೆಡೆ ಸೆಳೆದುಕೊಳ್ಳಲು ನಿಮಗೆ ಆಮಿಷವೊಡ್ಡುತ್ತಾರೆ.
ಬಿಜೆಪಿಯಿಂದ ಯಾರಾದರೂ ನಿಮ್ಮನ್ನ ಸಂಪರ್ಕಿಸಿದರೆ ಪಕ್ಷದ ಮುಖಂಡರಿಗೆ ತಿಳಿಸಿ. ನಮ್ಮ ನಿಜವಾದ ಸಂಪತ್ತು ಜನರ ನಂಬಿಕೆ. ನಿಮ್ಮಲ್ಲಿ ಯಾರಾದರೂ ಒಬ್ಬರು ಇದನ್ನು ಕಳೆದುಕೊಂಡರೆ ಅದು ಆರು ಕೋಟಿ ಜನರ ನಂಬಿಕೆಗೆ ದ್ರೋಹ ಮಾಡಿದಂತೆ ಎಂದು ಕೇಜ್ರಿವಾಲ್ ಎಚ್ಚರಿಸಿದರು.