ಲಖನೌ(ಉತ್ತರ ಪ್ರದೇಶ): ಕರ್ನಾಟಕದಲ್ಲಿ ಉದ್ಭವವಾಗಿರುವ ಹಿಜಾಬ್ ವಿವಾದ ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ಲಗ್ಗೆ ಹಾಕಿದ್ದು, ರಾಜಕೀಯ ರೂಪ ಪಡೆದುಕೊಂಡಿದೆ. ಇದರ ಮಧ್ಯೆ ಉತ್ತರ ಪ್ರದೇಶದಲ್ಲಿ ಹಿಜಾಬ್ ಹಾಕಿಕೊಂಡು ಬೋರ್ಡ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌದ ಶಾಮಿನಾ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಇಂಟರ್ ಕಾಲೇಜ್ನಲ್ಲಿ ಈ ಪ್ರಕರಣ ನಡೆದಿದೆ. ನಿನ್ನೆಯಿಂದ ಬೋರ್ಡ್ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯೋರ್ವಳು ಹಿಜಾಬ್ ಹಾಕಿಕೊಂಡು ಬಂದಿದ್ದಳು. ಈ ವೇಳೆ ಆಕೆಯನ್ನು ತಡೆಯಲಾಗಿದೆ. ಬಾಲಕಿ ಮತ್ತು ಆಕೆಯ ಪೋಷಕರು ಇದರ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ, ತಪಾಸಣೆ ನಡೆಸಿ ನಂತರ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಅದೇ ರೀತಿ ಲಖನೌದ ಹನುಮಾನ್ ಪ್ರಸಾದ್ ರಸ್ತೋಗಿ ಇಂಟರ್ ಕಾಲೇಜ್ನಲ್ಲೂ ವಿದ್ಯಾರ್ಥಿಯೋರ್ವಳು ಹಿಜಾಬ್ ತೆಗೆದನಂತರವೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ: ಪಂಜಾಬ್ ಸಿಎಂ ಮಹತ್ವದ ನಿರ್ಧಾರ
ಉತ್ತರ ಪ್ರದೇಶದಲ್ಲಿ ಬೋರ್ಡ್ ಪರೀಕ್ಷೆ ಸುಗಮವಾಗಿ ನಡೆಸಲು ಶಿಕ್ಷಣ ಇಲಾಖೆ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದ್ದು, ಅಲ್ಲಿ ದೂರು ನೀಡಿದ ಬಳಿಕ ಇಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಮಾರ್ಚ್ 24ರಿಂದ ಬೋರ್ಡ್ ಪರೀಕ್ಷೆ ಪ್ರಾರಂಭಗೊಂಡಿದ್ದು, ಏಪ್ರಿಲ್ 12ರಂದು ಮುಕ್ತಾಯಗೊಳ್ಳಲಿವೆ. ಕರ್ನಾಟಕದಲ್ಲಿ ಹಿಜಾಬ್ಗೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ಮಹತ್ವದ ಆದೇಶ ಹೊರಹಾಕಿದ್ದು, ಶಾಲಾ-ಕಾಲೇಜ್ಗಳಲ್ಲಿ ಸಮವಸ್ತ್ರ ಧರಿಸಿಕೊಂಡು ಹೋಗುವಂತೆ ತಿಳಿಸಿದೆ. ಇದೇ ವಿಚಾರವಾಗಿ ಮಾತನಾಡಿರುವ ಸಚಿವ ನಾಗೇಶ್ ಕೂಡ, ಹಿಜಾಬ್ ಹಾಕಿಕೊಂಡು ಹೋಗುವವರಿಗೆ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ.