ತಿರುವಳ್ಳೂರು(ತಮಿಳುನಾಡು): ತಮಿಳುನಾಡಿನ ಕಲ್ಲಕುರುಚಿಯ ಖಾಸಗಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಕಳೆದ ವಾರ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತಿರುವಳ್ಳೂರಿನ ಹಾಸ್ಟೆಲ್ನಲ್ಲಿ 12ನೇ ತರಗತಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ.
ತಿರುವಳ್ಳೂರು ಜಿಲ್ಲೆಯ ಕೀಜಚೇರಿ ಪಂಚಾಯತ್‌ನ ಮಾಪೇಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಅನುದಾನಿತ ಮಹಿಳಾ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದ ತಿರುತ್ತಣಿ ತಕ್ಕಲೂರು ಗ್ರಾಮದ 17 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಇಂದು ಬೆಳಗ್ಗೆ ವಿದ್ಯಾರ್ಥಿನಿಯರೊಂದಿಗೆ ಎಂದಿನಂತೆ ತಿಂಡಿ ಸೇವನೆ ಮಾಡಿದ್ದು, ಇದರ ಬೆನ್ನಲ್ಲೇ ಸಹಪಾಠಿಗಳು ತರಗತಿಗೆ ತೆರಳುತ್ತಿದ್ದಂತೆ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳಕ್ಕೆ ತಿರುವಳ್ಳೂರು ಉಪ ಪೊಲೀಸ್ ವರಿಷ್ಠಾಧಿಕಾರಿ ಚಂದ್ರದಾಸನ್, ಸಬ್ ಇನ್ಸ್ಪೆಕ್ಟರ್ ಇಳಂಗೋ ಭೇಟಿ ನೀಡಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಈಗಾಗಲೇ ಪ್ರಕರಣದ ತನಿಖೆ ಆರಂಭಗೊಂಡಿದೆ. ಘಟನೆ ಬೆನ್ನಲ್ಲೇ ಸಂತ್ರಸ್ತೆಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪ್ರತಿಭಟನೆ ಸಹ ನಡೆಸುತ್ತಿದ್ದಾರೆ.
ಇದನ್ನೂ ಓದಿರಿ: ಮಣ್ಣಲ್ಲಿ ಮಣ್ಣಾದ ಕಲ್ಲಕುರಿಚಿ ಪಿಯುಸಿ ವಿದ್ಯಾರ್ಥಿನಿ.. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗಿ
ಒಂದು ವಾರದ ಹಿಂದೆ 12ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆ ತಮಿಳುನಾಡಿನಲ್ಲಿ ಹಿಂಸಾಚಾರಕ್ಕೂ ಕಾರಣವಾಗಿತ್ತು. ಕಳೆದ ಮೂರು ದಿನಗಳ ಹಿಂದೆ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಸಾವಿರಾರು ಜನರು ಭಾಗಿಯಾಗಿದ್ದರು.