ಪುಣೆ(ಮಹಾರಾಷ್ಟ್ರ): ಪುಣೆ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಓದುತ್ತಿದ್ದ (ಎಫ್‌ಟಿಐಐ) ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. 25 ವರ್ಷದ ಯುವತಿ ಗುರುವಾರ ಮಧ್ಯಾಹ್ನ ಬೆಡ್ ಶೀಟ್‌ನಿಂದ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾಳೆ. ಇದೇ ಸಂಸ್ಥೆಯಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿಯನ್ನು ಕಾಮಾಕ್ಷಿ ಬೊಹ್ರಾ(25) ಎಂದು ಗುರುತಿಸಲಾಗಿದೆ. ಈಕೆ ಉತ್ತರಾಖಂಡ ಮೂಲದವಳು ಎಂದು ಗುರುತಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕಾಮಾಕ್ಷಿ ನೈನಿತಾಲ್ ಮೂಲದ ಯುವತಿ. 2019ರಿಂದ ಪುಣೆಯ ಹಾಸ್ಟೆಲ್ನಲ್ಲಿ ವಾಸವಾಗಿದ್ದು, ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮಾ ಇನ್ ಆ್ಯಕ್ಟಿಂಗ್ ಕೋರ್ಸ್ ಮಾಡುತ್ತಿದ್ದಳು. ಹಾಸ್ಟೆಲ್ ರೂಂನಲ್ಲಿ ಏಕಾಂಗಿಯಾಗಿದ್ದ ವಿದ್ಯಾರ್ಥಿನಿ, ಯಾರೊಂದಿಗೂ ಬೆರೆಯುತ್ತಿರಲಿಲ್ಲವಂತೆ. ಗುರುವಾರ ತರಗತಿಗೆ ಬಾರದೇ ಇದ್ದ ಕಾರಣ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ದೇವಸ್ಥಾನಕ್ಕೆ ಕರೆದೊಯ್ಯುವ ನೆಪದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರ ಬಂಧನ
ಸ್ಥಳೀಯ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುರಳೀಧರ ಕರ್ಪೆ ಸೇರಿದಂತೆ ಅನೇಕರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆಗಸ್ಟ್ 5ರಂದು ಇದೇ ಹಾಸ್ಟೆಲ್ನ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ.