ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ 28 ವರ್ಷದ ಯುವಕನೊಬ್ಬ ಮಾಜಿ ಪ್ರೇಯಸಿಯನ್ನು ಚಾಕುವಿನಿಂದ ಇರಿದು ನಂತರ ತಾನು ಚಾಕುವಿನಿಂದ ಇರಿದುಕೊಂಡ ಘಟನೆ ಮುಂಬೈನ ದಾದರ್ ಪ್ರದೇಶದಲ್ಲಿ ನಡೆದಿದೆ.
ನವೆಂಬರ್ 14 ರಂದು ದಾದರ್‌ನಲ್ಲಿ 25 ವರ್ಷದ ಯುವತಿಯ ಮೇಲೆ ತೇಜಸ್ ಖೋಬ್ರೆಕರ್ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದ. ಚಾಕು ಇರಿತಕ್ಕೊಳಗಾದ ಯುವತಿ ಮತ್ತು ಆರೋಪಿ ತೇಜಸ್ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ತೇಜಸ್ ಮದ್ಯದ ಚಟಕ್ಕೆ ದಾಸನಾಗಿದ್ದ ಕಾರಣ ಕೊನೆ ಘಳಿಗೆಯಲ್ಲಿ ಯುವತಿ ಮದುವೆಗೆ ನಿರಾಕರಿಸಿದ್ದಳು. ಹೀಗಾಗಿ ಇಬ್ಬರ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು. ಮದುವೆಗೆ ನಿರಾಕರಿಸಿದ ನಂತರವೂ ತೇಜಸ್ ಯುವತಿಯನ್ನು ಭೇಟಿಯಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.
ಈ ಮಧ್ಯೆ, ಕಳೆದ ಕೆಲವು ತಿಂಗಳುಗಳಿಂದ ಯುವತಿ ಅವನ ಕಾಲ್ ರಿಸೀವ್ ಮಾಡಲು ನಿರಾಕರಿಸುತ್ತಿದ್ದಳು. ಆದರೆ, ನವೆಂಬರ್ 14 ರಂದು ಬೆಳಗ್ಗೆ 11 ಗಂಟೆಗೆ ದಾದರ್ ಪ್ರದೇಶದಲ್ಲಿ ತೇಜಸ್ ಅವಳು ಭೇಟಿಯಾದರು. ಈ ವೇಳೆ, ತೇಜಸ್ ಆಕೆಯ ಮೇಲೆ ಹಲ್ಲೆ ಮಾಡಿದ. ಅವಳು ಆತನಿಂದ ತಪ್ಪಿಸಿಕೊಂಡು ಓಡುವಾಗ ಹಿಂಬಾಲಿಸಿ ಆಕೆಯನ್ನು ನೆಲಕ್ಕೆ ಬೀಳಿಸಿ ಚಾಕುವಿನಿಂದ ಇರಿದ ಅಷ್ಟರಲ್ಲಿ ಜನರು ಜಮಾಯಿಸದ್ದರಿಂದ ತಾನೂ ಚಾಕುವಿನಿಂದ ಇರಿದುಕೊಂಡಿದ್ದಾನೆ. ಗಾಯಗೊಂಡ ಯುವತಿಯನ್ನು ಸ್ಥಳೀಯರು ಕೆಇಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ತೇಜಸ್ ಖೋಬ್ರೆಕರ್ಡಿಸ್ಚಾರ್ಜ್ ಆದ ಬಳಿಕ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, “ನಾವು ಆಸ್ಪತ್ರೆಯ ತೇಜಸ್ ವಾರ್ಡ್ ಬಳಿ ಸಾಕಷ್ಟು ಭದ್ರತೆಯನ್ನು ನಿಯೋಜಿಸಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ತನಿಖೆಗಾಗಿ ನಾವು ಆತನನ್ನು ಬಂಧಿಸುತ್ತೇವೆ. ಐಪಿಸಿ ಸೆ. 307 (ಕೊಲೆ ಯತ್ನ), ಸೆ. 323 ಮತ್ತು 506 ಅಡಿ ಕೇಸ್ ದಾಖಲಿಸಲಾಗಿದೆ ಎಂದು ತಿಳಿಸಿದ್ರು.