ಲಖನೌ(ಉತ್ತರ ಪ್ರದೇಶ): ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಯುವತಿಯೋರ್ವಳು ಕೆಲಸ ಮುಗಿಸಿ, ಮನೆಗೆ ಹಿಂದಿರುಗುವಾಗ ದುಷ್ಕರ್ಮಿಗಳು ಆಕೆಯ ಮೇಲೆ ಚಾಕುವಿನಿಂದ ಹಲ್ಲೆಗೈದಿರುವ ಘಟನೆ ಲಖನೌನ ಗುಡಂಬಾದಲ್ಲಿ ನಡೆದಿದೆ.
ಹಲ್ಲೆಗೊಳಗಾಗಿ ರಸ್ತೆಯಲ್ಲಿ ನರಳುತ್ತಿದ್ದ ಯುವತಿಯನ್ನು ನೋಡಿದ ದಾರಿಹೋಕನೊಬ್ಬ ಪೊಲೀಸರಿಗೆ ಮಾಹಿತಿ ನೀಡಿ, ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಯುವತಿಗೆ ಸದ್ಯಕ್ಕೆ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಯುವತಿ ಬಾರಬಂಕಿಯ ಮದರ್ಪುರ ಕುರ್ಸಿ ನಿವಾಸಿಯಾಗಿದ್ದು, ಮಹ್ಬುಲ್ಲಾಪುರ ರೈಲ್ವೆ ನಿಲ್ದಾಣದ ಬಳಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿಕೊಂಡು ಹೊರಡುವಾಗ ಸಹರಾ ಎಸ್ಟೇಟ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಚಾಕುವಿನಿಂದ ಹೊಟ್ಟೆಗೆ ತಿವಿದು ಪರಾರಿಯಾಗಿದ್ದಾರೆ.
ಈ ಕುರಿತು ಯುವತಿಯ ತಂದೆ ಪೊಲೀಸರ ಬಳಿ ಹೇಳಿಕೆ ನೀಡಿದ್ದು, ತನ್ನ ಸಂಬಂಧಿಯೊಂದಿಗೆ ಇತ್ತೀಚೆಗೆ ಯುವತಿ ಜಗಳ ಮಾಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆ ಮಾಡಿ ಶವ ಹೂತಿಟ್ಟರು.. ಮೈಸೂರಲ್ಲಿ ಆರೋಪಿಗಳು ಅರೆಸ್ಟ್